

ಶಿವಮೊಗ್ಗ: ಸರ್ವರಿಗೂ ಉದ್ಯೋಗ ಶೀರ್ಷಿಕೆಯಡಿ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಫೆ.24ರಂದು ಎಟಿಎನ್‌ಸಿಸಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ಜಿಪಂ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿದ ಅವರು, ಬೆಳಗ್ಗೆ 9.30ರಿಂದ ಸಂಜೆವರೆಗೆ ಉದ್ಯೋಗ ಮೇಳ ಆಯೋಜಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮೇಳ ಉದ್ಘಾಟಿಸುವರು ಎಂದರು.
50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿವೆ. ನೇರ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಗುತ್ತದೆ. ಯುವನಿಧಿ ನೋಂದಣಿ ಅಭಿಯಾನವನ್ನೂ ಕೈಗೊಳ್ಳಲಾಗುವುದು. ಅದಕ್ಕಾಗಿ ಪ್ರತ್ಯೇಕ ಮಳಿಗೆ ಸ್ಥಾಪಿಸಿ ಇದುವರೆಗೆ ನೋಂದಣಿಯಾಗದ ಅರ್ಹ ಅಭ್ಯರ್ಥಿಗಳನ್ನು ಯುವನಿಧಿಗೆ ನೋಂದಣಿ ಮಾಡಲಾಗುವುದು ಎಂದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಉದ್ಯೋಗ ಮೇಳವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸಬೇಕು. ಜಿಲ್ಲಾದ್ಯಂತ ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದರು.
ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ಸುರೇಶ್ ಮಾತನಾಡಿ, 65 ಕಂಪನಿಗಳ ಜತೆ ಮಾತನಾಡಲಾಗಿದೆ. 50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. 18ರಿಂದ 35 ವರ್ಷದೊಳಗಿನವರು ಆನ್‌ಲೈನ್ https://forms.gle/se41pagcoriexpppgಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ದೂರವಾಣಿ(08182-255294, 9019485688)ಗೆ ಸಂಪರ್ಕಿಸಬಹುದು ಎಂದರು.