

ಕೊಪ್ಪಳ: ನಗರದ ಕುಷ್ಟಗಿ ರಸ್ತೆ ಬಜಾರಮಠ ಲೇಔಟ್ಗೆ ಸರಿಯಾಗಿ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿ ನಿವಾಸಿಗಳು ಗುರುವಾರ ಖಾಲಿ ಕೊಡ ಹಿಡಿದು ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಡಾವಣೆ ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ವ್ಯಾಪ್ತಿಯಲ್ಲಿದೆ. ಆದರೆ, ಕುಡಿವ ನೀರು ಪೂರೈಸುತ್ತಿಲ್ಲ. ಕೊಪ್ಪಳ ನಗರಸಭೆಯಿಂದ ಪೈಪ್ಲೈನ್ ಮಾಡಿ, ಅಲ್ಲಲ್ಲಿ ನಳ ಸಂಪರ್ಕ ನೀಡಲಾಗಿದೆ. ಆದರೆ, ನಗಸಭೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ನೀರು ಪೂರೈಸುತ್ತಿಲ್ಲ. ಪಪಂ ಅಧಿಕಾರಿಗಳು ದೂರದಲ್ಲಿದ್ದು, ನಗರಸಭೆಯಿಂದಲೇ ನೀರು ಒದಗಿಸಲಾಗುವುದೆಂದು ಹೇಳುತ್ತಾರೆ. ಆದರೆ, ತಿಂಗಳುಗಟ್ಟಲೇ ನೀರು ಬಿಡುವುದಿಲ್ಲ. ಬೇಸಿಗೆ ಆರಂಭವಾಗಿದ್ದು, ಸಾಕಷ್ಟು ಸಮಸ್ಯೆ ಆಗುತ್ತಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆ ಇದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಹರಿಸಬೇಕು. ಅದರ ಬದಲು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆಂದು ಜನರು ಅಳಲು ತೋಡಿಕೊಂಡರು.
ನಗರಠಾಣೆ ಪಿಐ ಜಯಪ್ರಕಾಶ ಸ್ಥಳಕ್ಕಾಗಿಮಿಸಿ ಸಮಸ್ಯೆ ಆಲಿಸಿದರು. ರಸ್ತೆ ತಡೆದು ಪ್ರತಿಭಟಿಸುವುದು ಸರಿಯಲ್ಲ. ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತನ್ನಿ. ನಾವು ನಿಮಗೆ ಸಹಾಯ ಮಾಡುತ್ತೇವೆಂದು ಮನವೊಲಿಸಿದರು. ಬಳಿಕ ನಗರಸಭೆಗೆ ತೆರಳಿ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳು ನೀರು ಪೂರೈಕೆ ಭರವಸೆ ನೀಡಿದ ಬಳಿಕ ಜನರು ಪ್ರತಿಭಟನೆ ಕೈಬಿಟ್ಟರು.
ನಿವಾಸಿಗಳಾದ ನಾಗರಾಜ ಮೇದಾರ, ಮಲಿಯಮ್ಮ ಮೇದಾರ, ಚೌರಪ್ಪ, ಶಾಂತಮ್ಮ ಮೇದಾರ, ಮಂಜಮ್ಮ, ಕೀರಪ್ಪ, ಸೋಮಶೇಖರ, ಪ್ರವಿಣ, ಹುಲುಗಪ್ಪ, ಈರಣ್ಣ, ಸಂಗಮ್ಮ ಇತರರಿದ್ದರು.
ಸಹಾಯವಾಣಿ ಆರಂಭ : ನಗರಸಭೆ ವ್ಯಾಪ್ತಿಯಲ್ಲಿ ಕುಡಿವ ನೀರು ಸಮಸ್ಯೆಗೆ ಸ್ಪಂದಿಸಲು ನಗರಸಭೆಯಿಂದ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಬೇಸಿಗೆ ಅಂಗವಾಗಿ ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸಮಸ್ಯೆಗಳಾದಲ್ಲಿ ಜನರು 08539-&230192 ಮತ್ತು 9880662053, 9986136806ಗೆ ಕರೆ ಮಾಡಿ ದೂರು ಸಲ್ಲಿಸಿ. ತಕ್ಷಣ ನಗರಸಭೆ ಸಿಬ್ಬಂದಿ ಸಮಸ್ಯೆ ಪರಿಹರಿಸುವರೆಂದು ಪೌರಾಯುಕ್ತ ಗಣಪತಿ ಪಾಟೀಲ್ ತಿಳಿಸಿದ್ದಾರೆ.