

ಕಳಸ: ನಾಗದೇವರ ದೇವಸ್ಥಾನವೆಂದೇ ಪ್ರಸಿದ್ಧಿ ಪಡೆದ ಭದ್ರಾ ನದಿ ದಡದಲ್ಲಿ ನೆಲೆನಿಂತ ಹಳುವಳ್ಳಿ ಶ್ರೀ ಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಭಕ್ತರು ಪೂಜೆ ಸಲ್ಲಿಸಿದರು. ದೇವಸ್ಥಾನದ ನಾಗ ಬನಕ್ಕೆ ಭೇಟಿ ನೀಡಿ ಭಕ್ತರು ಸರತಿ ಸಾಲಿನಲ್ಲಿ ನಿಂತು ನಾಗ ಶಿಲೆಗಳಿಗೆ ಹಾಲು, ಎಳನೀರು ಅರ್ಪಿಸಿದರು.
ಭಕ್ತರು ತಮ್ಮ ಕಷ್ಟಕಾಲದಲ್ಲಿ ಹೇಳಿಕೊಂಡ ಹರಕೆಯಂತೆ ಬೆಳ್ಳಿಯ ಹಾವಿನ ಹೆಡೆ, ಮೊಟ್ಟೆ, ನರ, ತೊಟ್ಟಿಲು ಮತ್ತಿತರ ವಸ್ತುಗಳನ್ನು ಹರಕೆ ರೂಪದಲ್ಲಿ ದೇವರಿಗೆ ಸಲ್ಲಿಸಿ ಪೂಜೆಗಳನ್ನು ನೆರವೇರಿಸಿದರು.
ಹೊರನಾಡು, ಬಾಳೆಹೊಳೆ, ಹಿರೇಬೈಲು, ಸಂಸೆ, ಮರಸಣಿಗೆ, ಕಳಸ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ನಾಗರ ಪಂಚಮಿ ಅಂಗವಾಗಿ ಕಲಶೇಶ್ವರ ದೇವಸ್ಥಾನದ ನಾಗಬನದಲ್ಲೂ ಭಕ್ತರು ನಾಗ ಶಿಲೆಗೆ ಹಾಲೆರೆದರು.
ಇನ್ನು ಕೆಲವೆಡೆ ನಾಗ ಬನವಿರುವ ಕುಟುಂಬದ ಮನೆಗಳಲ್ಲೂ ನಾಗನ ಶಿಲೆಗೆ ತನಿ ಎರೆದು ನಾಗದೋಷ ನಿವಾರಣೆಗಾಗಿ ಪ್ರಾರ್ಥಿಸಿದರು.