

ಬೆಂಗಳೂರು: ಐದು ತಿಂಗಳಿಂದ ಕರೊನಾ ವಿರುದ್ಧದ ಯುದ್ಧದಲ್ಲಿ ಸಮರ ಸೇನಾನಿಗಳಾಗಿ ಮುಂಚೂಣಿಯಲ್ಲಿ ನಿಂತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಬಸವಳಿದು ಬೆಂಡಾಗಿದ್ದಾರೆ. ಹೆಚ್ಚೆಚ್ಚು ಟೆಸ್ಟ್ ನಡೆಸುವುದು, ತಕ್ಷಣ ಫಲಿತಾಂಶ ನೀಡುವುದು, ಪ್ರಾಥಮಿಕ ಹಾಗೂ ಎರಡನೇ ಹಂತದ ಸಂರ್ಪತರನ್ನು ಬೇರ್ಪಡಿಸುವುದು ಸರ್ಕಾರಕ್ಕೆ ಅನಿವಾರ್ಯ. ಸಾವಿನ ಸಂಖ್ಯೆ ಕಡಿಮೆ ಮಾಡಬೇಕೆಂದರೆ ಈ ಕೆಲಸ ಆಗಲೇಬೇಕು. ಆದರೆ, ಈ ಗುರಿ ವಾರಿಯರ್ಗಳನ್ನು ಬಸವಳಿಯುವಂತೆ ಮಾಡಿದೆ.
ಆರಂಭದಲ್ಲಿ ವಾರಿಯರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರೀಗ ಒಂದುದಿನ ಬಿಡುವು ಸಿಕ್ಕರೆ ಸಾಕು ಎಂಬ ಸ್ಥಿತಿ ತಲುಪಿದ್ದಾರೆ. ಜತೆಗೆ ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣದ ಬಳಿಕ ಸರ್ಕಾರದ ವಿರುದ್ಧ ಸೆಟೆದು ನಿಲ್ಲುವ ಮಾತನ್ನಾಡಲು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿರುವ ಅಧಿಕಾರಿಯೊಬ್ಬರು ವಿಜಯವಾಣಿಯೊಂದಿಗೆ ಮಾತನಾಡಿ, ನಿರಂತರವಾಗಿ ಕರೊನಾ ನಿರ್ವಹಣೆಯಲ್ಲಿ ಪಾಲ್ಗೊಂಡು ಕುಟುಂಬ, ವಿಶ್ರಾಂತಿ, ಸ್ವಯಂ ಆರೋಗ್ಯ ಕಾಳಜಿ ಮರೆತುಬಿಟ್ಟಿದ್ದೇವೆ. ನಮಗೀಗ ಕೊಂಚ ವಿರಾಮ ಬೇಕೇ ಬೇಕು ಎಂದಿದ್ದಾರೆ. ಅಲ್ಲದೇ, ಒಂದಷ್ಟು ಅಧಿಕಾರಿಗಳು ಒಟ್ಟಿಗೆ ಸೇರಿ ಅನೌಪಚಾರಿಕ ಸಭೆ ನಡೆಸಿದ್ದು, ಸರ್ಕಾರದ ಮೇಲೆ ಯಾವ ರೀತಿ ಒತ್ತಡ ಹೇರಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದಾಗಿ ತಿಳಿಸಿದ್ದಾರೆ. ಹೆಚ್ಚು ಸಿಬ್ಬಂದಿ ಬಳಸಿಕೊಂಡರೆ ಒತ್ತಡ ಸಮಾನ ಹಂಚಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಕರೊನಾ ನಿರ್ವಹಣೆಯಿಂದ ತಾತ್ಕಾಲಿಕ ಬಿಡುಗಡೆ ಪಡೆಯಬೇಕೋ? ಬಗ್ಗೆ ಚರ್ಚೆ ನಡೆದಿವೆ. ಸೋಮವಾರದ ನಂತರ ಚರ್ಚೆ ಇನ್ನಷ್ಟು ವ್ಯಾಪಕವಾಗಲಿದೆ ಎಂದಿದ್ದಾರೆ.
ಅತಿಯಾದ ಟಾರ್ಗೆಟ್: ಸೋಂಕಿತರು ಹಾಗೂ ಸಂರ್ಪತರ ಪತ್ತೆ, ಕ್ವಾರಂಟೈನ್ ಅಥವಾ ಟೆಸ್ಟ್ಗೊಳಪಡಿಸುವುದು ಸಾಮಾನ್ಯ ಕಾರ್ಯನಿರ್ವಹಣೆ. ಈ ಕೆಲಸ ಹೆಚ್ಚಾದಷ್ಟೂ ಸೋಂಕಿತರ ಸಂಖ್ಯೆ ಕಡಿಮೆ ಮಾಡಬಹುದೆಂದು ಸರ್ಕಾರ ನಂಬಿಕೊಂಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿದೆ. ಪ್ರಾಥಮಿಕ ಸಂಪರ್ಕದಲ್ಲಿ 5ರಿಂದ 8 ಮಂದಿ, ದ್ವಿತೀಯ ಸಂಪರ್ಕದಲ್ಲಿ 16 ಮಂದಿಯವರೆಗೆ ಪತ್ತೆ ಹಚ್ಚುವುದೇ ವಾರಿಯರ್ಗಳಿಗೆ ಸವಾಲಾಗಿದೆ. ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಮುಖ್ಯಕಾರ್ಯದರ್ಶಿ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮಾಹಿತಿ ಕೇಳುತ್ತಾರೆಂಬ ಕಾರಣಕ್ಕೆ ಈ ತಂಡಗಳು ಸಕ್ರಿಯವಾಗಿವೆಯಾದರೂ, ತಂಡದ ಮುಖ್ಯಸ್ಥರು ಕೆಲ ಹಂತದವರ ಮೇಲೆ ಪ್ರತಿ ದಿನದ ಗುರಿಗಳನ್ನು ಮುಟ್ಟಲು ಒತ್ತಡ ಹೇರುತ್ತಿದ್ದಾರೆ.