ವಿಧಾನಸಭೆ ವಿಸರ್ಜಿಸಿ ಅಧಿಕಾರದಿಂದ ತೊಲಗಿ; ಮಾಜಿ ಸಚಿವ ಅಶ್ವತ್ಥ ನಾರಾಯಣ ಆಗ್ರಹ

Former Minister Dr.C.N.Ashwath Narayan allegation on cong govt
Published on

ಬೆಂಗಳೂರು: ಜನಪರ, ನಿಷ್ಪಕ್ಷಪಾತ ಆಡಳಿತ ನೀಡುವಲ್ಲಿ ಅಸಮರ್ಥ ಕಾಂಗ್ರೆಸ್ ಅಧಿಕಾರ ಬಿಟ್ಟು ತೊಲಗಲಿ. ಸಿಎಂ, ಡಿಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸಬೇಕು ಎಂದು ಬಿಜೆಪಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಗ್ರಹಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಪ್ರಶ್ನೆ ಮಾಡುವವರ ವಿರುದ್ಧ ಕೇಸ್ ದಾಖಲಿಸಿ ಬೆದರಿಸಿದರು. ಮಾಧ್ಯಮದವರಿಗೆ ನೋಟಿಸ್ ನೀಡಿ ಹೆದರಿಸಲು ಪ್ರಯತ್ನಿಸಿದರು.

ಇದೀಗ ಆರ್‌ಟಿಐ ಕಾರ್ಯಕರ್ತರ ಪೂರ್ಣ ವಿವರ ಪಡೆಯಲು ಮುಂದಾಗಿದ್ದಾರೆ. ಕಾಯ್ದೆ ಪ್ರಕಾರ ಮಾಹಿತಿ ಹಕ್ಕು ಅರ್ಜಿದಾರರಿಗೆ ಒತ್ತಾಸೆ ನೀಡಬೇಕು. ಆದರೆ ಆರ್‌ಟಿಐ ಹೋರಾಟಗಾರರಲ್ಲಿ ಭೀತಿ ಸೃಷ್ಟಿಸಲು ಸರ್ಕಾರ ಹವಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದುಗಳನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲ. ಆದರೆ ಮುಸ್ಲಿಮ್ ಸಮುದಾಯದವರಿಗೆ 10 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ.

ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಅಮಾಯಕರು, ಸೋದರರು ಎನ್ನುತ್ತಾರೆ. ಬಂಧಿತ ಭಯೋತ್ಪಾದಕರು ಆರೋಪಿಗಳು ಎಂದು ಕರೆಯಲು ಸಲಹೆ ನೀಡುತ್ತಾರೆ. ಶಿವಮೊಗ್ಗದ ಘಟನೆ ಸಣ್ಣದು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

ರೈತರ ಸಂಕಷ್ಟ ನಿರ್ಲಕ್ಷ್ಯ

ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಾತ್ಪೂರ್ತಿಕ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಬರಗಾಲದಿಂದ ತತ್ತರಿಸಿರುವ ರೈತರ ಬೆಳೆ ನಷ್ಟಕ್ಕೆ ಪರಿಹಾರವಿಲ್ಲ. ಸಾಲದ ಅವಧಿ ವಿಸ್ತರಣೆ ಇತ್ಯಾದಿ ಕ್ರಮಗಳನ್ನು ನಿರ್ಲಕ್ಷಿಸಿದೆ.

ಕಾವೇರಿ ವಿವಾದ ಸಮರ್ಪಕವಾಗಿ ನಿರ್ವಹಣೆಯಲ್ಲಿ ಮುಗ್ಗರಿಸಿದೆ. ಕಾವೇರಿ ನದಿ ದಕ್ಷಿಣಭಾರತದ ಆಸ್ತಿ ಎಂದು ಹೇಳುತ್ತಾರೆ. ತಮಿಳುನಾಡಿಗೆ ಸದ್ದಿಲ್ಲದೆ ನೀರು ಹರಿಸಿ, ಪ್ರಧಾನಿ ಮಧ್ಯೆ ಪ್ರವೇಶಿಸಲು ಬಯಸುತ್ತಾರೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ವೈಲ್ಯಗಳ ಸರಣಿ ಬಿಚ್ಚಿಟ್ಟರು.

ಓಲೈಕೆಗೂ ಮಿತಿ ಬೇಡವೆ ?

ಜೈನ ಮುನಿ ಹತ್ಯೆ, ಹಿಂದು ಕಾರ್ಯಕರ್ತನ ಕೊಲೆ, ಬೆಂಗಳೂರಿನಲ್ಲಿ ಭಯೋತ್ಪಾದಕರ ಬಂಧನ, ಉಡುಪಿ ಕಾಲೇಜು ಘಟನೆಗಳು ಮಾಸುವ ಮುನ್ನ ಶಿವಮೊಗ್ಗದಲ್ಲಿ ದಾಂಧಲೆ ನಡೆದಿದೆ.

ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿತಕ್ಕೆ ಈ ಘಟನೆಯೇ ನಿದರ್ಶನ. ಔರಂಗಜೇಬ್ ದಿ ಗ್ರೇಟ್, ಕತ್ತಿ, ಟಿಪ್ಪು ಸುಲ್ತಾನ್ ಒಂದು ಕೋಮಿನ ವ್ಯಕ್ತಿ ಹತ್ಯೆ ಮಾಡುವ ದೊಡ್ಡ ಕಟೌಟ್‌ಗಳು, ಭಾರತ ನಕ್ಷೆಗೆ ಹಸಿರು ಬಣ್ಣ ಬಳಿದ ಕೃತ್ಯಗಳು ನಡೆಯುವ ತನಕ ಗುಪ್ತಚರ ಇಲಾಖೆ ಎಲ್ಲಿತ್ತು ?.

ಅಮಾಯಕರ ಮನೆಗಳ ಮೇಲೆ ಕಲ್ಲೆಸೆತ, ಇಷ್ಟೆಲ್ಲ ಅನಾಹುತಗಳಾಗಿದ್ದರೂ ಸರ್ಕಾರ ಏನೂ ಆಗಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗೂ ಒಂದು ಮಿತಿ ಬೇಡವೆ ? ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net