ಗೋತಬಯ ಸಂಪುಟ ವಿಸರ್ಜನೆ; ದ್ವೀಪರಾಷ್ಟ್ರ ಬಿಕ್ಕಟ್ಟು ಶಮನಕ್ಕೆ ಸಂಯುಕ್ತ ಕ್ಯಾಬಿನೆಟ್ ಸೂತ್ರ

Srilanka
ಅಧ್ಯಕ್ಷ ಗೋತಬಯ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ಕೊಲಂಬೊದಲ್ಲಿ ಪ್ರತಿಭಟನೆ.
Published on

ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಬಿಗಡಾಯಿಸುತ್ತಿದ್ದು ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ಸೋದರ ಹಾಗೂ ಹಣಕಾಸು ಸಚಿವ ಬಾಸಿಲ್ ರಾಜಪಕ್ಸ ಅವರನ್ನು ವಜಾ ಮಾಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶ್ರೀಲಂಕಾ ಪೊದುಜನ್ ಪೆರುಮನ (ಎಸ್​ಎಲ್​ಪಿಪಿ) ಪಕ್ಷದೊಳಗಡೆ ಬಾಸಿಲ್ ವಿರುದ್ಧ ಅತೃಪ್ತಿ ಮಡುಗಟ್ಟಿತ್ತು. ಭಾನುವಾರ ರಾತ್ರಿ ವರೆಗೆ ನ್ಯಾಯ ಖಾತೆ ಸಚಿವರಾಗಿದ್ದ ಅಲಿ ಸಬ್ರಿ ಅವರನ್ನು ಹೊಸ ವಿತ್ತ ಸಚಿವರಾಗಿ ನೇಮಕ ಮಾಡಲಾಗಿದೆ.

ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ನೆರವಿನ ಪ್ಯಾಕೇಜ್ ಪಡೆಯಲಿಕ್ಕಾಗಿ ಬಾಸಿಲ್ ಅಮೆರಿಕಕ್ಕೆ ಭೇಟಿ ನೀಡಬೇಕಿತ್ತು. ಕಳೆದ ತಿಂಗಳು ಬಾಸಿಲ್​ರನ್ನು ಬಹಿರಂಗವಾಗಿ ಟೀಕಿಸಿದ್ದಕ್ಕೆ ಇಬ್ಬರು ಸಚಿವರನ್ನು ಅಧ್ಯಕ್ಷ ಗೋತಬಯ ವಜಾ ಮಾಡಿದ್ದರು. ಈಗ ಬಾಸಿಲ್​ರಿಗೇ ಕೊಕ್ ನೀಡಿದ್ದಾರೆ.

ಸಾಮೂಹಿಕ ರಾಜೀನಾಮೆ: 26 ಕ್ಯಾಬಿನೆಟ್ ಸಚಿವರು ಭಾನುವಾರ ರಾತ್ರಿ ರಾಜೀನಾಮೆ ನೀಡಿದ ನಂತರ ಮೂವರು ಹೊಸ ಸಚಿವರನ್ನು ನೇಮಿಸಲಾಗಿದೆ. ಜಿ.ಎಲ್. ಪೆರಿಸ್ ಹೊಸ ವಿದೇಶಾಂಗ ಸಚಿವರಾಗಿದ್ದು ದಿನೇಶ್ ಗುಣವರ್ಧನೆ ಶಿಕ್ಷಣ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜಾನ್​ಸ್ಟನ್ ಫರ್ನಾಂಡೋ ಹೆದ್ದಾರಿ ಖಾತೆಯ ಹೊಸ ಸಚಿವರಾಗಿದ್ದಾರೆ.

ಸಂಯುಕ್ತ ಸಂಪುಟಕ್ಕೆ ಸೇರಲು ಆಹ್ವಾನ: ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಭುಗಿಲೆದ್ದಿರುವ ಆಕ್ರೋಶವನ್ನು ತಣಿಸುವ ಉದ್ದೇಶದಿಂದ ಅಧ್ಯಕ್ಷ ಗೋತಬಯ, ಏಕತಾ ಸರ್ಕಾರವನ್ನು ಸೇರುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ. ಅದರ ಬೆನ್ನಲ್ಲೇ ಮಂತ್ರಿ ಮಂಡಲಕ್ಕೆ ಸಾಮೂಹಿಕ ರಾಜೀನಾಮೆಯ ಬೆಳವಣಿಗೆ ನಡೆದಿದೆ. ‘ಈಗ ಉದ್ಭವಿಸಿರುವ ರಾಷ್ಟ್ರೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಅಧ್ಯಕ್ಷ ಗೋತಬಯ ರಾಜಪಕ್ಸ ಎಲ್ಲ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದ್ದಾರೆ’ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಗೋತಬಯ ರಾಜೀನಾಮೆಗೆ ಆಗ್ರಹ: ತುರ್ತು ಪರಿಸ್ಥಿತಿ ಹಾಗೂ ಕರ್ಫ್ಯೂ ಹೇರಿದ್ದರೂ ಕೋಪೋದ್ರಿಕ್ತ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಅಧ್ಯಕ್ಷ ಗೋತಬಯ ರಾಜಪಕ್ಸ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಸಾರ್ವಜನಿಕರ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಬಲವಾಗಿ ಖಂಡಿಸಿರುವ ಪ್ರತಿಪಕ್ಷ ಸಂಸದ ಹರ್ಷ ಡಿ ಸಿಲ್ವ, ‘ನಾವು ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ’ ಎಂದು ಹೇಳಿದ್ದಾರೆ.

ಕೇಂದ್ರೀಯ ಬ್ಯಾಂಕ್ ಗವರ್ನರ್ ಪದತ್ಯಾಗ: ದೇಶದ ಆಂತರಿಕ ರಾಜಕೀಯ ಪ್ರಕ್ಷೋಭೆ ಹಿನ್ನೆಲೆಯಲ್ಲಿ ಶ್ರೀಲಂಕಾ ಕೇಂದ್ರೀಯ ಬ್ಯಾಂಕ್ ಗವರ್ನರ್ ಅಜಿತ್ ನಿವಾರ್ಡ್ ಕ್ಯಾಬ್ರಾಲ್ ಸೋಮವಾರ ಹುದ್ದೆಯನ್ನು ತ್ಯಜಿಸಿದ್ದಾರೆ. 67 ವರ್ಷದ ಕ್ಯಾಬ್ರಾಲ್, ಟ್ವಿಟರ್​ನಲ್ಲಿ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ. ಏಳು ತಿಂಗಳ ಹಿಂದೆಯಷ್ಟೇ ಅವರು ಗವರ್ನರ್ ಹುದ್ದೆಗೆ ಪದೋನ್ನತಿ ಹೊಂದಿದ್ದರು.

ಕುಟುಂಬ ಹಿಡಿತದಲ್ಲಿ ಲಂಕಾ

ಪುಟ್ಟ ದ್ವೀಪ ರಾಷ್ಟ್ರ ಶ್ರೀಲಂಕಾದ ಆಡಳಿತ ಒಂದು ಕುಟುಂಬದ ಹಿಡಿತದಲ್ಲಿದೆ. ಒಂದೇ ಕುಟುಂಬ ದೇಶವನ್ನು ಆಳುತ್ತಿದೆ ಎಂದರೂ ತಪ್ಪಿಲ್ಲ. ಅಧ್ಯಕ್ಷ, ಪ್ರಧಾನಿ ಆದಿಯಾಗಿ ಎಲ್ಲ ಪ್ರಮುಖ ಹುದ್ದೆ ಹಾಗೂ ಸ್ಥಾನಗಳು ಅವರ ಮಧ್ಯೆ ಹಂಚಿ ಹೋಗಿವೆ.

ಮಹಿಂದ ರಾಜಪಕ್ಸ: 76 ವರ್ಷದ ಮಹಿಂದ ರಾಜಪಕ್ಸ ಈ ಕುಟುಂಬದ ಪ್ರಭಾವಿ ವ್ಯಕ್ತಿಯಾಗಿದ್ದು ಪ್ರಸ್ತುತ ದೇಶದ ಪ್ರಧಾನಿ ಆಗಿದ್ದಾರೆ. 2004ರಲ್ಲೂ ಪ್ರಧಾನಿ ಆಗಿದ್ದರು. 2005ರಿಂದ 2015ರ ವರೆಗೆ ಶ್ರೀಲಂಕಾದ ಅಧ್ಯಕ್ಷ ಹುದ್ದೆಯಲ್ಲಿದ್ದರು. ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದ ಕಿರಿಯ ಸೋದರ ಗೋತಬಯ ರಾಜಪಕ್ಸ, ಎರಡನೇ ಅವಧಿಗೆ ಅಣ್ಣ ಮಹಿಂದರನ್ನು ಪ್ರಧಾನಿ ಹುದ್ದೆಗೆ ನೇಮಿಸಿದ್ದರು. 2009ರಲ್ಲಿ ಪ್ರತ್ಯೇಕತಾವಾದಿ ತಮಿಳು ಬಂಡುಕೋರರನ್ನು ದಮನಿಸಿದ್ದಕ್ಕಾಗಿ ಮಹಿಂದ, ದೇಶದ ಬಹುಸಂಖ್ಯಾತ ಸಿಂಹಳ-ಬೌದ್ಧರಲ್ಲಿ ಜನಪ್ರಿಯರಾಗಿದ್ದಾರೆ. ದಶಕಗಳಷ್ಟು ದೀರ್ಘ ಆಂತರಿಕ ಯುದ್ಧ ಕೊನೆಗೊಳಿಸಿದ ಶ್ರೇಯಸ್ಸು ಅವರದ್ದು ಎನ್ನಲಾಗುತ್ತದೆ.

ಬಾಸಿಲ್ ರಾಜಪಕ್ಸ: ರಾಜಕೀಯ ಚಾಣಕ್ಯ ಎಂದೇ ಖ್ಯಾತರಾದ ಬಾಸಿಲ್ ರಾಜಪಕ್ಸ (70) ದೇಶದ ಹಣಕಾಸು ಮಂತ್ರಿಯಾಗಿದ್ದರು. ಪ್ರಸಕ್ತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರನ್ನು ಗೋತಬಯ ವಜಾ ಮಾಡಿದ್ದಾರೆ. ಸರ್ಕಾರಿ ಗುತ್ತಿಗೆಗಳಲ್ಲಿ ಕಮಿಷನ್ ಪಡೆದ ಆರೋಪಗಳ ಹಿನ್ನೆಲೆಯಲ್ಲಿ ಇವರನ್ನು ‘ಮಿಸ್ಟರ್ ಟೆನ್ ಪರ್ಸೆಂಟ್’ ಎಂದು ಬಿಬಿಸಿ ಸಂದರ್ಶನವೊಂದರಲ್ಲಿ ವರ್ಣಿಸಲಾಗಿತ್ತು. ಆದರೆ, ಅವರ ವಿರುದ್ಧ ಲಂಚದ ಆರೋಪ ಸಾಬೀತು ಪಡಿಸಲು ಆಗಿರಲಿಲ್ಲ. ಗೋತಬಯ ಅಧ್ಯಕ್ಷರಾದ ನಂತರ ಬಾಸಿಲ್ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ಕೈ ಬಿಡಲಾಗಿದೆ.

ಗೋತಬಯ ರಾಜಪಕ್ಸ: 72 ವರ್ಷದ ಗೋತಬಯ ರಾಜಪಕ್ಸ ಹಾಲಿ ಶ್ರೀಲಂಕಾದ ಅಧ್ಯಕ್ಷರು. ಅಣ್ಣ ಮಹಿಂದ ಅಧಿಕಾರದಲ್ಲಿದ್ದಾಗ, ಸರ್ಕಾರದಲ್ಲಿ ಆಯಕಟ್ಟಿನ ಹಾಗೂ ಪ್ರಭಾವಶಾಲಿ ಹುದ್ದೆಗಳಲ್ಲಿದ್ದರು. ರಕ್ಷಣಾ ಸಚಿವರ ಕಾರ್ಯದರ್ಶಿಯಾಗಿದ್ದ ಗೋತಬಯ, ಸಶಸ್ತ್ರ ಪಡೆಗಳು ಮತ್ತು ಪೊಲೀಸ್ ಪಡೆಯ ದೈನಂದಿನ ಕಾರ್ಯ ಚಟುವಟಿಕೆ ಮೇಲೆ ನಿಯಂತ್ರಣ ಹೊಂದಿದ್ದರು. ಸ್ವತಃ ತಮ್ಮ ಕುಟುಂಬ ಸದಸ್ಯರಿಂದಲೇ ’ದಿ ಟರ್ವಿುನೇಟರ್’ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಗೋತಬಯರಿಗೆ ಸ್ವತಃ ತಮ್ಮ ಸಿಡುಕು ಬುದ್ಧಿಯ (ಶಾರ್ಟ್ ಟೆಂರ್) ಮೇಲೆಯೇ ಭಯವಿದೆ. ಪ್ರತಿಪಕ್ಷ ನಾಯಕರು ಹಾಗೂ ಕಾರ್ಯಕರ್ತರನ್ನು ಅಮಾನುಷ ವಾಗಿ ನಡೆಸಿಕೊಂಡ ಕುಖ್ಯಾತಿ ಹೊಂದಿದ್ದಾರೆ.

ಚಮಲ್ ರಾಜಪಕ್ಸ: ಮಹಿಂದ ರಾಜಪಕ್ಸ ಪ್ರಧಾನಿಯಾಗಿದ್ದಾಗ, ಚಮಲ್ ರಾಜಪಕ್ಸ (79) ಸಂಸತ್ತಿನ ಸ್ಪೀಕರ್ ಆಗಿದ್ದರು. ನೌಕಾ ಯಾನ ಹಾಗೂ ವಿಮಾನ ಯಾನ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅವರು ನೀರಾವರಿ ಖಾತೆಯ ಸಚಿವರಾಗಿದ್ದರು. ಅಧ್ಯಕ್ಷ ಗೋತಬಯ ರಕ್ಷಣಾ ಸಚಿವರೂ ಆಗಿದ್ದು ಈ ಸಚಿವಾಲಯದಲ್ಲಿ ಚಮಲ್ ನಂಬರ್ 2 ಆಗಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯಾದ ಚಮಲ್, ಜಗತ್ತಿನ ಪ್ರಪ್ರಥಮ ಮಹಿಳಾ ಪ್ರಧಾನಿ ಸಿರಿಮಾವೋ ಬಂಡಾರನಾಯಿಕೆ ಅವರ ಖಾಸಗಿ ಅಂಗರಕ್ಷಕರಾಗಿದ್ದರು.

ನಮಲ್ ರಾಜಪಕ್ಸ: ವೃತ್ತಿಯಲ್ಲಿ ವಕೀಲರಾಗಿರುವ ನಮಲ್ ರಾಜಪಕ್ಸ (35), ಮಹಿಂದ ರಾಜಪಕ್ಸರ ಹಿರಿಯ ಪುತ್ರ. ನಮಲ್​ನನ್ನು ಒಂದಲ್ಲ ಒಂದು ದಿನ ದೇಶದ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವುದು ತಂದೆಯ ಕನಸಾಗಿದೆ. ರಾಜಪಕ್ಸ ಕುಟುಂಬದ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿರುವ ನಮಲ್, 2010ರಲ್ಲಿ ಕೇವಲ 24 ವರ್ಷ ಪ್ರಾಯದಲ್ಲಿ ಸಂಸತ್ ಪ್ರವೇಶಿಸಿದ್ದರು. ಸದ್ಯ ಕ್ರೀಡೆ ಮತ್ತು ಯುವಜನ ಖಾತೆ ಸಚಿವರಾಗಿದ್ದರು. ತಂದೆ ಮಹಿಂದ ಒಂದು ದಶಕದಷ್ಟು ಸುದೀರ್ಘ ಕಾಲ ಅಧಿಕಾರದಲ್ಲಿದ್ದಾಗ ನಮಲ್ ಯಾವುದೇ ಅಧಿಕಾರದ ಸ್ಥಾನದಲ್ಲಿ ಇಲ್ಲದಿದ್ದರೂ ಭಾರಿ ಪ್ರಭಾವಶಾಲಿ ಆಗಿದ್ದರು. ಭ್ರಷ್ಟಾಚಾರ ಹಾಗೂ ಹಣಕಾಸು ದುರ್ಬಳಕೆ ಆರೋಪಗಳು ಅವರ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net