

ಬೆಂಗಳೂರು : ದೇಶದಲ್ಲಿ ತಯಾರಾಗುವ ಟ್ರಾೃಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕಣಗಳ ‘ಗರಿಷ್ಠ ಚಿಲ್ಲರೆ ಮಾರಾಟ ದರ’ (ಎಂಆರ್‌ಪಿ)ವನ್ನು ಆಯಾ ಉತ್ಪಾದಕ ಕಂಪೆನಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಹಾಗೂ ಉಪಕರಣಗಳ ಮೇಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಹೈಕೋರ್ಟ್ 5 ಸಾವಿರ ರೂ. ದಂಡ ವಿಧಿಸಿದೆ.
ಈ ಕುರಿತಾಗಿ ದಾವಣಗೆರೆಯ ವಿ. ರಾಘವೇಂದ್ರ ಪ್ರಸಾದ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಾದ ಆಲಿಸಿದ ನ್ಯಾಯಪೀಠ, ಈ ವಿಚಾರವು ಸರ್ಕಾರದ ನೀತಿ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಅರ್ಜಿದಾರರು ತಮ್ಮ ಮನವಿಯನ್ನು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳ ಮುಂದೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತ್ತು.
ಆ ಕೂಡಲೇ ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಸ್ವತಃ ಅರ್ಜಿದಾರರು ಕಳೆದ 30 ವರ್ಷಗಳಿಂದ ಸ್ವರಾಜ್ ಮಜ್ದಾ ಟ್ರಾೃಕ್ಟರ್‌ಗಳ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ ನಡೆಸುತ್ತಿದ್ದಾರೆ ಎಂಬುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ ಜತೆಗೆ ಅರ್ಜಿದಾರರಿಗೆ 5 ಸಾವಿರ ರೂ. ದಂಡ ವಿಧಿಸಿ, ದಂಡದ ಮೊತ್ತವನ್ನು ಮೂರು ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ನಿರ್ದೇಶನ ನೀಡಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.