ಮೈತ್ರಿ ಅಸಮಾಧಾನ ಶೀಘ್ರ ಶಮನ; ನಿಖಿಲ್ ಕುಮಾರಸ್ವಾಮಿ

Nikhil
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಶಾಸಕ ಮುನಿರತ್ನ ಇದ್ದರು.
Published on

ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿ ವಿಚಾರದಲ್ಲಿ ಸಣ್ಣ ಪುಟ್ಟ ಅಸಮಾಧಾನ ಇದೆ. ಕುಳಿತುಕೊಂಡು ಎಲ್ಲ ಸರಿ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಶೀಘ್ರದಲ್ಲಿ ಎಲ್ಲ ನಾಯಕರ ಜತೆ ಸಭೆ ಮಾಡಿ‌ ಅಸಮಾಧಾನ ಶಮನ ಮಾಡೋ ಕೆಲಸ ಮಾಡುತ್ತೇವೆ ಎಂದರು.
10-15 ದಿನಗಳ ಹಿಂದೆ ನಮ್ಮ ಮನೆಯಲ್ಲಿ ಶಾಸಕರು, ನಾಯಕರು, ಎಂಎಲ್ಸಿಗಳ ಸಭೆ ಮಾಡಲಾಗಿತ್ತು.
ದೇವೇಗೌಡರ ಕೂಲಂಕಷವಾಗಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಕುಮಾರಸ್ವಾಮಿ, ಇಬ್ರಾಹಿಂ ಕೂಡ ಅ ಸಭೆಯಲ್ಲಿ ಇದ್ದರು. ಯಾರನ್ನು ಬಿಟ್ಟು ಮಾಡುವ ಪ್ರಶ್ನೆ ಇಲ್ಲ.ಒಂದು ದೊಡ್ಡ ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲರನ್ನೂ ವಿಶ್ವಾಸದಲ್ಲಿ ತೆಗೆದುಕೊಂಡು ಹೋಗೋ ಕೆಲಸ ಪಕ್ಷ ಮಾಡುತ್ತದೆ. ಶರಣಗೌಡ ಕಂದಕೂರು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

ರಾಜ್ಯದ ಹಿತಾಸಕ್ತಿಗೆ ಮೈತ್ರಿ

ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವುದು ರಾಜ್ಯದ ಹಿತಾಸಕ್ತಿ ಕಾಪಾಡಲು. ದೇವೇಗೌಡರು ತೆಗೆದುಕೊಂಡು ತೀರ್ಮಾನ ಇದು. ಕಾಂಗ್ರೆಸ್ ನವರು ನಮ್ಮ ಬಗ್ಗೆ ಪದೇ ಪದೇ ಬಿಜೆಪಿ ಬಿ ಟೀಂ ಎಂದ ಅಪ ಪ್ರಚಾರ ಮಾಡುತ್ತಿದ್ದರು. ಇಲ್ಲಿಯವರೆಗೂ  ನಾವು ಎಂದೂ ಕೂಡ ಏಕಾಂಗಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹಿಂಬಾಗಿಲಿನಿಂದ ನಾವು ಒಳ ಒಪ್ಪಂದ ಮಾಡಿಕೊಂಡು ನಾವು ಹೋರಾಟ ಮಾಡಿಲ್ಲ. ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ‌ಪಕ್ಷ ಅತಿ ಕೆಳಗೆ ಹೋಗುತ್ತದೆ. ಕಾಂಗ್ರೆಸ್ ನಾಯಕರು ಹತಾಶೆಯಿಂದ ಮಾತಾಡ್ತಿದ್ದಾರೆ. ಇದಕ್ಕೆ ಜನ ಉತ್ತರ ಕೊಡ್ತಾರೆ ಎಂದು ಟಾಂಗ್ ಕೊಟ್ಟರು.

ನಾನು ಲೋಕಸಭೆಗೆ ಸ್ಪರ್ಧಿಸಲ್ಲ:


ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತ ಪ್ರಶ್ನೆಗೆ, ನಾನು ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ಈಗ ನಮ್ಮ ಮುಂದೆ ಇರುವುದು ಪ್ರಾದೇಶಿಕ ಪಕ್ಷ ಉಳಿಸಬೇಕು, ಬೆಳೆಸಬೇಕು ಎಂಬುದು. ಪಕ್ಷ  ಉಳಿಸಲು ಕಾರ್ಯಕರ್ತನಾಗಿ, ಯುವಕನಾಗಿ ಕೆಲಸ ಮಾಡುತ್ತೇನೆ.
ಬಹಳ ಸ್ಪಷ್ಟವಾಗಿ ಹೇಳ್ತೀನಿ ನಾನು ಯಾವುದೇ ರೀತಿ ಆಕಾಂಕ್ಷಿ ಅಲ್ಲ. ನಾನು ಈಗಾಗಲೇ ಹೇಳಿದ್ದೇನೆ. ಮತ್ತೆ ಉಲ್ಟಾ ಹೊಡೆಯೋ ಗಿರಾಕಿ ನಾನಲ್ಲ . ಅನೇಕ ಕಾರ್ಯಕರ್ತರು ನಿಲ್ಲಬೇಕು ಎಂದು ವಯಕ್ತಿಕ ಭಾವನೆ ಹೇಳುತ್ತಾರೆ. ಅದರ ಬಗ್ಗೆ ನನಗೆ ಗೌರವ ಇದೆ.
ಮಂಡ್ಯದಲ್ಲಿ ಪ್ರಬಲ ನಾಯಕರು ಇದ್ದಾರೆ. ನಮಗೆ ಪ್ರಬಲ ಅಭ್ಯರ್ಥಿಗಳು ಸಿಗುತ್ತಾರೆ. ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net