

ಬೆಂಗಳೂರು: ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದ ಮಹಿಳೆಯರು ಹಾಗೂ ರಾಹುಲ್ ಗಾಂಧಿಗೆ ನೂಲಿನ ಹಾರ ಹಾಕಲು ಮುಂದಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಕಕ್ಕೆ ತಳ್ಳಿರುವ ವಿಡಿಯೋ ತುಣುಕುಗಳನ್ನು ಪ್ರತಿಪಕ್ಷ ಬಿಜೆಪಿ ವೈರಲ್ ಮಾಡಿದೆ. ರಾಜ್ಯ ಬಿಜೆಪಿ ಜಾಲತಾಣದ ಖಾತೆಯಲ್ಲಿ ಬೆಳಗಾವಿಯ ಇವರೆಡೂ ವಿಡಿಯೋ ತುಣುಕುಗಳನ್ನು ಹಂಚಿಕೊಂಡು, ‘ಆ ದಿನಗಳು’ ಎಂದು ದೂಷಿಸಿದೆ.
ಕಾಂಗ್ರೆಸ್ ಮಹಾಧಿವೇಶನದ ನಿಮಿತ್ತ ಪಕ್ಷದ ರಾಷ್ಟ್ರ, ರಾಜ್ಯ ನಾಯಕರು ಬೆಳಗಾವಿಗೆ ಗುರುವಾರ ಆಗಮಿಸಿದ ವೇಳೆ ಪಕ್ಷದ ಮಹಿಳಾ ಕಾರ್ಯಕರ್ತರು ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಟ್ಟಿಗೆದ್ದು ಮಹಿಳಾ ಕಾರ್ಯಕರ್ತರನ್ನು ಪಕ್ಕಕ್ಕೆ ತಳ್ಳುತ್ತಿರುವ ದೃಢ ವಿಡಿಯೋ ತುಣುಕಿನಲ್ಲಿದೆ. ತಮ್ಮ ಬಾಸ್ಗೆ ಓಲೈಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಗೂಂಡಾ ರೀತಿಯಲ್ಲಿ ವರ್ತಿಸಿದ್ದಾರೆ. ಸ್ವಪಕ್ಷದ ಮಹಿಳಾ ಕಾರ್ಯಕರ್ತರಿಗೆ ಮುಜುಗರ ಉಂಟು ಮಾಡಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರ ಸುರಕ್ಷತೆ ನಿರೀಕ್ಷಿಸಲು ಸಾಧ್ಯವೆ? ಎಂದು ರಾಜ್ಯ ಬಿಜೆಪಿ ಕೇಳಿದೆ.
ಬೆಳಗಾವಿಗೆ ಬಂದ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೂಲಿನ ಹಾರ ಹಾಕಲು ಮುಂದಾದರೆ, ಡಿ.ಕೆ.ಶಿವಕುಮಾರ್ ಅವರನ್ನು ಪಕ್ಕಕ್ಕೆ ತಳ್ಳುತ್ತಿರುವ ಮತ್ತೊಂದು ವಿಡಿಯೋ ತುಣಕು ಹಂಚಿಕೊಂಡ ಬಿಜೆಪಿ, ವಾಗ್ದಾಳಿ ಮಾಡಿದೆ. ದಲಿತರೆಂದರೆ ಕಾಂಗ್ರೆಸ್ ಕಾಲ ಕಸಕ್ಕಿಂತೂ ಕೀಳಾಗಿ ನೋಡುತ್ತಲೇ ಬಂದಿದೆ. ವೋಟ್ ಬ್ಯಾಂಕ್ಗಾಗಿ ದಲಿತರನ್ನು ದುರುಪಯೋಗ ಮಾಡಿಕೊಂಡು ಅವರನ್ನು ಸದಾಕಾಲವೂ ತುಳಿಯುತ್ತಿದೆ. ಅಂದು ಬಾಬಾಸಾಹೇಬ್ ಅಂಬೇಡ್ಕರ್ರಿಂದ ಹಿಡಿದು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆವರೆಗೂ ಅವಮಾನ ಮಾಡುತ್ತಲೇ ಇದೆ. ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರ ದಲಿತ ವಿರೋಧಿ ನಡೆಯನ್ನು ‘ಆ ದಿನಗಳ’ ಡಿ.ಕೆ.ಶಿವಕುಮಾರ್ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ದೂರಿದೆ.
ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ಗಾಳಿಗೆ ತೂರಿದ ಪಕ್ಷ ಕಾಂಗ್ರೆಸ್. ಗಾಂಧಿ ಮತ್ತು ಡಾ.ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ, ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ. ದೇಶದ ಅಖಂಡತೆ, ಸಮಗ್ರತೆ ಬಗ್ಗೆ ಬದ್ಧತೆಯಿಲ್ಲ, ದೇಶ ಒಡೆಯುವ ಕೆಲಸ ಕಾಂಗ್ರೆಸ್ಸಿಗರು ಮಾಡಿದ್ದಾರೆ. | ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ