ಗೋವಾ ಕಾಂಗ್ರೆಸ್​ನಲ್ಲಿ ಭಿನ್ನಮತ: ಇಬ್ಬರು ಶಾಸಕರ ಅನರ್ಹತೆಗಾಗಿ ಸ್ಪೀಕರ್​ಗೆ ಮನವಿ

Goacongress
Published on

ಪಣಜಿ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಬೆನ್ನಲ್ಲೇ ಇದೀಗ ಗೋವಾದ ಕಾಂಗ್ರೆಸ್​​ನಲ್ಲೂ ಭಿನ್ನಮತ ಸ್ಫೋಟಗೊಂಡಿದ್ದು, ಇಬ್ಬರು ಶಾಸಕರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್​ ವಿಧಾನಸಭೆಯ ಸ್ಪೀಕರ್​ಗೆ ಮನವಿ ಮಾಡಿದೆ.

ಬಿಜೆಪಿ ಜತೆ ಸಂಪರ್ಕ ಹೊಂದಿರುವ 11 ಶಾಸಕರ ಪೈಕಿ ಇಬ್ಬರು ಶಾಸಕರಾದ ದಿಗಂಬರ್​ ಕಾಮತ್​ ಮತ್ತು ಮೈಕೆಲ್​ ಲೋಬೋ ಅವರನ್ನು ಪಕ್ಷಾಂತರ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅನರ್ಹಗೊಳಿಸಬೇಕೆಂದು ಕೋರಿದೆ. ಈ ಇಬ್ಬರು ಶಾಸಕರು ಆಡಳಿತರೂಢ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷವನ್ನು ವಿಭಜಿಸಲು ಯತ್ನಿಸುತ್ತಿರುವುದರಿಂದ ಕೂಡಲೇ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕೆಂದು ಸ್ಪೀಕರ್​ಗೆ ಮನವಿ ಮಾಡಿಕೊಂಡಿದೆ.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ದಿನೇಶ್ ಗುಂಡೂರಾವ್ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಆಡಳಿತಾರೂಢ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ದಿನೇಶ್ ಗುಂಡೂರಾವ್ ಅವರ ಹೇಳಿಕೆ ಆಘಾತ ಮತ್ತು ದಿಗ್ಭ್ರಮೆ ಮೂಡಿಸಿದೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಸ್ಪೀಕರ್ ಗೆ ಮನವಿ ಮಾಡಿದೆ.

ಈ ಇಬ್ಬರು ಶಾಸಕರು ಬಿಜೆಪಿಗೆ ಸೇರಲು ಪ್ರಯತ್ನಿಸುತ್ತಿದ್ದು,ದಿಗಂಬರ್ ಕಾಮತ್ ವಿರುದ್ಧ ಅನೇಕ ಪ್ರಕರಣಗಳಿದ್ದು ಇವುಗಳಿಂದ ರಕ್ಷಣೆ ಪಡೆಯಲು ಪಕ್ಷಾಂತರಕ್ಕೆ ಮುಂದಾಗಿದ್ರೆ, ಮೈಕೆಲ್ ಲೋಬೋ ಅಧಿಕಾರ ಮತ್ತು ಸ್ಥಾನದ ಆಸೆಗಾಗಿ ಕೈ ಕೊಡುವ ಪ್ರಯತ್ನದಲ್ಲಿದ್ದಾರೆ ಎಂದು ಕಾಂಗ್ರೆಸ್​ ಉಸ್ತುವಾರಿ ದಿನೇಶ್ ಗುಂಡೂರಾವ್​ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net