

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಪ್ರತಿಪಕ್ಷ ನಾಯಕ ಆರ್.ಅಶೋಕ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದಾರೆ.
ವಾಲ್ಮೀಕಿ ನಿಗಮದ ಹಗರಣ ವಿಚಾರ ಇಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಶೋಕ್ ಅವರು ತಮ್ಮನ್ನು ನಿಂದಿಸಿದರು, ಈ ಕಾರಣಕ್ಕೆ ಹಕ್ಕುಚ್ಯುತಿ ಮಂಡಿಸಿರುವುದಾಗಿ ಪ್ರದೀಪ್ ಈಶ್ವರ್ ವಿಧಾನಸಭೆಯಲ್ಲಿ ತಿಳಿಸಿದರು.
ಹೊಸ ಶಾಸಕರನ್ನು ಬೆಳೆಸಿ ಪ್ರೋತ್ಸಾಹಿಸಬೇಕು. ಪ್ರತಿಪಕ್ಷ ನಾಯಕರು ಬಳಸಿದ ಪದದಿಂದ ನನಗೆ ಬಹಳ ನೋವಾಗಿದೆ ಎಂದ ಅವರು ತಮ್ಮ ಕ್ಷೇತ್ರದಲ್ಲಿ 10 ಆಂಬ್ಯುಲೆನ್ಸ್ ಸೇವೆ ನೀಡಿದ್ದಕ್ಕೆ, 52 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದಕ್ಕೆ ಈ ರೀತಿ ಪದ ಬಳಸಿರಬಹುದು ಎಂದು ಅಸಮಾಧಾನ ಹೊರಹಾಕಿದರು.
ಬಳಿಕ ಮಾತನಾಡಿದ ಅಶೋಕ, ಕೆಟ್ಟಪದ ಬಳಸಿದ್ದೇನೆಂದು ಪ್ರದೀಪ್ ಈಶ್ವರ್ ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ಸದನದ ದಾಖಲೆಯಲ್ಲಿ ಅವಾಚ್ಯ ಶಬ್ದ ಬಳಸಿದ ಬಗ್ಗೆ ದಾಖಲೆ ಇಲ್ಲ. ಒಂದು ವೇಳೆ ಮಾತಾಡಿದ್ದರೆ ತಪ್ಪುತಪ್ಪೇ ಎಂದರು.
ಅಂತಿಮವಾಗಿ ಸ್ಪೀಕರ್ ಯು.ಟಿ.ಖಾದರ್, ಆಡಿಯೋ ವಿಡಿಯೋ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪ್ರಕಟಿಸಿದರು.