ಕರ್ತವ್ಯ ಲೋಪವೆಸಗಿದ ಕಾರ್ಯಕರ್ತೆ ವಜಾಗೆ ಕ್ರಮ

mysore
Published on

ಕೋಲಾರ: ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಸಮರ್ಪಕ ಮೊಟ್ಟೆ, ಊಟ ನೀಡದೆ ನಿರ್ಲಕ್ಷ್ಯವಹಿಸಿದ್ದ ಕಾರ್ಯಕರ್ತೆಯನ್ನು ವಜಾಗೊಳಿಸಲು ಕ್ರಮವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕರ್ತವ್ಯಲೋಪ ಎಸಗಿರುವುದರಿಂದ ಶ್ರೀನಿವಾಸಪುರ ತಾಲೂಕಿನ ಹಕ್ಕಿ-ಪಿಕ್ಕಿ ಕಾಲನಿ ಅಂಗನವಾಡಿ ಕೇಂದ್ರದ ಅಲುವೆಲಮ್ಮ ಅವರನ್ನು ಒಂದು ತಿಂಗಳ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಏನಿದು ಪ್ರಕರಣ?:
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಇತ್ತೀಚೆಗೆ ಕೈಗೊಂಡಿದ್ದ ಜಿಲ್ಲಾ ಪ್ರವಾಸದಲ್ಲಿ ಶ್ರೀನಿವಾಸಪುರ ತಾಲೂಕಿನ ಹಕ್ಕಿ-ಪಿಕ್ಕಿ ಕಾಲನಿಗೆ ಭೇಟಿ ನೀಡಿದ್ದರು. ಈ ವೇಳೆ ಅಂಗನವಾಡಿ ಮೂಲಕ ಊಟ, ಮೊಟ್ಟೆ ಹಾಗೂ ಪೌಷ್ಟಿಕ ಆಹಾರ ಪೂರೈಕೆಯಾಗುತ್ತಿಲ್ಲ ಎಂದು ಕಾಲನಿ ಮಹಿಳೆಯರು ಆರೋಪಿಸಿದ್ದರು. ಸಮಸ್ಯೆ ಆಲಿಸಿದ ಅಧ್ಯಕ್ಷೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಕ್ಕಳು, ಗರ್ಭಿಣಿಯರಿಗೆ ಸೌಲಭ್ಯ ವಿತರಿಸದಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರು.
ಈ ಮೇರೆಗೆ, ಕರ್ತವ್ಯ ಲೋಪವೆಸಗಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ತಕ್ಷಣವೇ ಕ್ರಮಕೈಗೊಂಡು ಜರೂರಾಗಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಿಡಿಪಿಒ ಅವರು ಅಂಗನವಾಡಿ ಕಾರ್ಯಕರ್ತೆ ಅಲುವೆಲಮ್ಮ ಅವರಿಗೆ ನೋಟಿಸ್ ನೀಡಿದ್ದು, ಅಂಗನವಾಡಿ ಕೇಂದ್ರದಲ್ಲಿಯೂ ಸಮರ್ಪಕ ದಾಖಲೆ ನಿರ್ವಹಣೆ ಮಾಡದಿರುವುದು ಬೆಳಕಿಗೆ ಬಂದಿದೆ. ಜತೆಗೆ ಎರಡು ತಿಂಗಳಿಂದ ಅಂಗನವಾಡಿಯಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಮೊಟ್ಟೆ ವಿತರಣೆ ಮಾಡದಿರುವುದು ಮತ್ತು ಕಾರ್ಯಕರ್ತೆ ಅನಧಿಕೃತವಾಗಿ ಗೈರಾಗಿರುವುದು ಕಂಡುಬಂದಿದೆ. ಹೀಗಾಗಿ ಸೆ.18 ರಿಂದ ಜನರಿಗೆ ಬರುವಂತೆ ಅಲುವೇಲಮ್ಮಗೆ ವೇತನ ರಹಿತ ಒಂದು ತಿಂಗಳ ರಜೆ ನೀಡಲಾಗಿದೆ ಎಂದು ಅನುಪಾಲನ ವರದಿ ಸಲ್ಲಿಸಿರುವ ಸಿಡಿಪಿಒ, ನಿರ್ಲಕ್ಷ್ಯ ತೋರಿರುವವರನ್ನು ಸೇವೆಯಿಂದ ವಜಾಗೊಳಿಸಲು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಆಯ್ಕೆ ಸಮಿತಿ ಅನುಮೋದನೆ ಪಡೆದು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net