ಅಧಿವೇಶನದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಚರ್ಚೆ: ಸುರೇಶ್‌ಕುಮಾರ್ | Urge to Speaker

Sub_Suresh kumar
Published on

ಬೆಂಗಳೂರು: ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಅವುಗಳ ಅಭಿವೃದ್ಧಿ ಕುರಿತು ಒಂದು ದಿನದ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಸ್ಪೀಕರ್ ಯು.ಟಿ.ಖಾದರ್‌ಗೆ ಪತ್ರ ಬರೆದು, ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಕೋರಿದ್ದಾರೆ.

ಮುಗ್ಧ ಸಮುದಾಯವಾದ ಸರ್ಕಾರಿ ಶಾಲಾ ಮಕ್ಕಳ ಪರವಾದ ಬಿನ್ನಹವಿದು ಎಂದಿರುವ ಅವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಮಸ್ಯೆಯ ಕುರಿತು ಚರ್ಚೆಯಾಗಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ವಿದ್ಯಾರ್ಥಿ ಕೇಂದ್ರಿತವಾಗಿರಬೇಕಾದ ವ್ಯವಸ್ಥೆಯು ಮೂಲರೂಪವನ್ನೇ ಸಂಪೂರ್ಣವಾಗಿ ವಿರೂಪಗೊಳಿಸಿ ಮೂಲ ಉದ್ದೇಶವನ್ನೇ ಮಸುಕಾಗಿಸಿದೆ. ನೂರಾರು ಸಮಸ್ಯೆಗಳು ಎಲ್ಲವೂ ಸಂಕೀರ್ಣವಾಗಿರುವುದರಿಂದ ಶಿಕ್ಷಣ ಎನ್ನುವುದು ಇಲಾಖೆಯ ಮೊದಲ ಆದ್ಯತೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಕಾರಾತ್ಮಕ ಆಶಯದಿಂದ ಪ್ರಾರಂಭಿಸಿದ ಯೋಜನೆಗಳು ಸರ್ಕಾರಿ ಶಾಲೆಗಳಿಗೆ ಮಾರಕವಾಗುತ್ತಿರುವುದು ಒಂದು ಕ್ರೂರ ಅಣಕವಾಗಿವೆ. ಶಾಲೆಗಳ ಸ್ಥಿತಿಗತಿ, ಶಿಕ್ಷಣ ಇಲಾಖೆ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ಕಾಯಕಲ್ಪ ನೀಡಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net