

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದು, ಎರಡು ಮತ್ತು ಮೂರನೇ ಮಕ್ಕಳನ್ನು ಒಟ್ಟು ಗೂಡಿಸಿ ಬೋಧಿಸುವ ‘ನಲಿ-ಕಲಿ’ ಬಹು ವರ್ಗದ ಬೋಧನಾ ಪದ್ಧತಿಯಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ತೋವ್ರ ಹೊಡೆತ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಬೇಕು ಎಂಬ ಚರ್ಚೆ ನಡೆಯುತ್ತಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಮಂಗಳವಾರ ನಡೆದಿರುವ ಸಭೆಯಲ್ಲಿ ಇಂತಹದ್ದೊಂದು ಚರ್ಚೆಯಾಗಿದೆ.
ರಾಜ್ಯ ಸರ್ಕಾರವು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಲಿ-ಕಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಪದ್ಧತಿಯಿಂದ ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. 1,2 ಮತ್ತು 3ನೇ ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕಲಿಸುತ್ತಿರುವುದರಿಂದ ಪಾಲಕರಲ್ಲಿಯೂ ಸಾಕಷ್ಟು ಗೊಂದಲಗಳಿವೆ. ಈ ಕಾರಣದಿಂದ ಪಾಲಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ‘ಮಲ್ಟಿಕ್ಲಾಸ್ ಟೀಚಿಂಗ್’ ಪದ್ಧತಿಯನ್ನು ಒಬ್ಬನೇ ಶಿಕ್ಷಕ ನಿಭಾಯಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈ ಬಿಡಬೇಕು ಎಂದು ಶಿಕ್ಷಕರ ಸಂಘದ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಕಲಿ-ನಲಿ ಯೋಜನೆ ಲೋಪಗಳು
- ಒಂದರಿಂದ ಮೂರನೇ ತರಗತಿ ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನ ಸೇರಿ ನಾಲ್ಕು ವಿಷಯಗಳಿರುತ್ತವೆ. ಮೂರು ತರಗತಿಗೆ 12 ವಿಷಯಗಳಾಗುತ್ತವೆ. ಅಂದರೆ, ಒಂದು ದಿನಕ್ಕೆ ಒಬ್ಬ ಶಿಕ್ಷಕ 12 ವಿಷಯಗಳಿಗೆ ಅರ್ಥವತ್ತಾಗಿ ಬೋಧನೆ ಮಾಡಲು ಸಾಧ್ಯವೇ?
- ಒಂದು ವಿಷಯಕ್ಕೆ ಒಬ್ಬ ಶಿಕ್ಷಕರಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಆದರೆ, ಮೂರು ತರಗತಿಗಳಿಗೆ ಒಬ್ಬ ಶಿಕ್ಷಕ ಎನ್ನುವುದು ಮಾತ್ರ ಅವೈಜ್ಞಾನಿಕ. ಇದು ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗಿದೆ.
- ನಲಿ ಕಲಿ ರದ್ದಾಗಿ ವರ್ಗವಾರು ಶಿಕ್ಷಕರು ನೇಮಕಗೊಂಡರೆ ಮಾತ್ರ ಮಕ್ಕಳ ಕಲಿಕೆ ಅತ್ಯುನ್ನತ ರೀತಿಯಲ್ಲಿ ಸುಧಾರಿಸಲು ಸಾಧ್ಯ. ಇಲ್ಲದಿದ್ದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರ ಮನೋಭಾವ ಯಾವತ್ತೂ ನಕಾರಾತ್ಮಕವಾಗಿರುತ್ತದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿತ ಹುನ್ನಾರ
ನಲಿ-ಕಲಿ ಅತ್ಯಂತ ಒಳ್ಳೆಯ ಪದ್ಧತಿಯಾಗಿದ್ದರೆ, ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಜಾರಿಗೊಳಿಸಿದ್ದೇಕೆ? ಹಾಗಾದರೆ, ಇದನ್ನು ರಾಜ್ಯದ ಎಲ್ಲ ಮಾದರಿಯ ಶಾಲೆಗಳಲ್ಲಿಯೂ ಜಾರಿಗೊಳಿಸಬೇಕು. ಇಲ್ಲದೇ ಹೋದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಮಾಡುವ ಹುನ್ನಾರ ಅಡಗಿದೆ ಎಂದು ಟೀಕೆ ಕೇಳಿಬಂದಿದೆ.
ಯೋಜನೆ ರದ್ದುಗೊಳಿಸಲು ಶಿಕ್ಷಕರ ಸಂಘದ ಪ್ರಸ್ತಾವನೆ
ನಲಿ-ಕಲಿ ಯೋಜನೆ ರದ್ದುಗೊಳಿಸಿ ಸಾಮರ್ಥ್ಯ ಆಧಾರಿತ ಕಲಿಕಾ ಪದ್ಧತಿಯನ್ನು ಜಾರಿಗೊಳಿಸಬೇಕು. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ನಿಗದಿಗೊಳಿಸಿ ಕನಿಷ್ಠ ಆ ಕೊಠಡಿಯೊಳಗಿರುವ ಮಕ್ಕಳು ಕನಿಷ್ಠ ಕಲಿಕಾ ಮಟ್ಟಗಳನ್ನು ನಿಗದಿಪಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಕ್ರಮ ವಹಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ನಲಿ ಕಲಿ ಯೋಜನೆಯಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುವ ಜತೆಗೆ ಕಲಿಕಾ ಗುಣಮಟ್ಟ ಕುಸಿಯುತ್ತಿದೆ. ಮೂರು ತರಗತಿಗಳಿಗೆ ಪಾಠ ಮಾಡಲು ಶಿಕ್ಷಕರಿಗೂ ಒತ್ತಡವಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಯೋಜನೆ ರದ್ದುಗೊಳಿಸಬೇಕು. - ಚಂದ್ರಶೇಖರ ನುಗ್ಗಲಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ