ಗ್ಯಾರಂಟಿ ಯೋಜನೆಗಳ ಸಾಧಕ-ಬಾಧಕ ಚರ್ಚೆ: ಸಚಿವ ಡಾ.ಜಿ.ಪರಮೇಶ್ವರ್ | Burden on Government well known

g parameshwara
Published on

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಸಾಧಕ-ಬಾಧಕ ಚರ್ಚಿಸುವ ಅಗತ್ಯವಿದೆ. ಚುನಾವಣೆ ಸಂದರ್ಭದಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಎಂದು ಹೇಳಿರಲಿಲ್ಲ. ಚರ್ಚಿಸಿದ ನಂತರ ಸರ್ಕಾರ ತೀರ್ಮಾನಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಅನೇಕ ಜನ ಬಿಡುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಸೇರಿ ಬಹಳಷ್ಟು ಜನ ಬಿಟ್ಟಿದ್ದಾರೆ. ಮುಂದುವರಿದು ಬಡವರಿಗಾಗಿ ಈ ಯೋಜನೆಗಳನ್ನು ಸೀಮಿತಗೊಳಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಲಹೆ ಕೊಟ್ಟಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಗತ್ಯತೆಯ ಬಗ್ಗೆ ಚರ್ಚೆ ಮಾಡಬೇಕು. ನಂತರ ಏನೆಂಬುದು ಗೊತ್ತಾಗಲಿದೆ. ಚುನಾವಣೆ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಎಂದು ಹೇಳಿರಲಿಲ್ಲ ಎಂದು ಡಾ.ಜಿ.ಪರಮೇಶ್ವರ್ ನೆನಪಿಸಿದರು.

ಗ್ಯಾರಂಟಿ ಯೋಜನೆಗಳಿಂದ ಹೊರೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರಕ್ಕೆ ಹೊರೆಯಾಗುವುದು ಗೊತ್ತಿದ್ದೂ ಬಡವರ ಅನುಕೂಲಕ್ಕಾಗಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು ಬೇಕಿಲ್ಲ. ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ದಲಿತರಿಗೆ ಮೀಸಲಿಟ್ಟ ಹಣವನ್ನು ದಲಿತರಿಗಾಗಿ ಬಳಕೆಯಾಗುತ್ತಿದೆ. ಅನುದಾನ ವಿನಿಯೋಗದಲ್ಲಿ ಕೆಲವು ಬದಲಾವಣೆ ಮಾಡಿದ ತಕ್ಷಣ ದುರ್ಬಳಕೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಜಿ.ಪರಮೇಶ್ವರ್ ಆಕ್ಷೇಪಿಸಿದರು.

ವರದಿಗೆ ಸೂಚನೆ

ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲೆ ಹಲ್ಲೆ, ಪೋಕ್ಸೋ ಕೇಸ್ ದಾಖಲಿಸಿದ್ದರ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಐಜಿಪಿ, ಎಸ್‌ಪಿಗೆ ಸೂಚಿಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಎರಡು ರಾಜ್ಯಗಳ ಬಸ್ ಸಂಚಾರ ನಿಲ್ಲಿಸಲಾಗಿದೆ. ವಾತಾವರಣ ತಿಳಿಯಾದ ಮೇಲೆ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

ಉದಯಗಿರಿ ಗಲಾಟೆಗೆ ಸಂಬಂಧಿಸಿಂತೆ ಬಿಜೆಪಿಯವರ ಹೋರಾಟ ಹತ್ತಿಕ್ಕುವ ಕೆಲಸ ಮಾಡಿಲ್ಲ. ಬೇರೆ ರೀತಿಯ ಬೆಳವಣಿಗೆಗಳಾಗಬಾರದು ಎಂಬ ಕಾರಣಕ್ಕೆ ಎರಡು ಕಡೆಯವರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿರಲಿಲ್ಲ. ಕೋರ್ಟ್‌ಗೆ ಹೋಗಿ ಆದೇಶ ಪಡೆದು ಮೈದಾನದಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲಿ ನಡೆಯಲಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನಿಸಿದ ಡಾ.ಜಿ.ಪರಮೇಶ್ವರ್, ಹೈಕಮಾಂಡ್ ಮತ್ತು ಕೆಪಿಸಿಸಿ ಅಧ್ಯಕ್ಷರ ಮಧ್ಯೆ ನಾವು ಪ್ರವೇಶಿಸುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net