

ಬೆಂಗಳೂರು: ಮಾಸ್ಕ್ ಕಡ್ಡಾಯ ನಿಯಮವನ್ನು ರಾಜ್ಯದಲ್ಲಿ ಸಡಿಲಗೊಳಿಸುವ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಜನರು ಬಗೆ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮೈಕ್ರೋ ಬ್ಲಾಗಿಂಗ್ ವೇದಿಕೆ ಕೂ ಆ್ಯಪ್ನಲ್ಲಿ #ಮಾಸ್ಕ್_ಕಡ್ಡಾಯ ಎನ್ನುವ ಹ್ಯಾಷ್ಟ್ಯಾಗ್ ಅಡಿ ನೆಟ್ಟಿಗರು ಮಾಸ್ಕ್ ಬೇಕೇ ಬೇಡವೇ ಎನ್ನುವ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕರೊನಾ ಇರಲಿ ಬಿಡಲಿ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಹೇಳಿದರೆ, ಇನ್ನು ಕೆಲವರು ಅಯ್ಯೋ ಎರಡುವರ್ಷದಿಂದ ಮಾಸ್ಕ್ ಧರಿಸಿ ಸಾಕಾಗಿದೆ ಎಂದೂ ಹೇಳಿದ್ದಾರೆ.
'ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಈ ನಿಯಮ ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ, ಸ್ವಲ್ಪ ದಿನಗಳ ಮಟ್ಟಿಗೆ, ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಒಳಿತು. ಯಾಕೆಂದರೆ ಕರೊನಾದಿಂದ ನಾವಿನ್ನೂ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದಿಲ್ಲ' ಎಂದಿದ್ದಾರೆ ಶಿಕ್ಷಕಿ ಸವಿತಾ.
'ಪಂಚೇಂದ್ರಿಯಗಳಲಿ ನಾಸಿಕವು ಒಂದು, ಜೀವಾನಿಲದ ಹೀರುವಿಕೆಯ ಇದರ ಕಾರ್ಯ ಸೂಕ್ಷ್ಮವಾದುದು, ಗಾಳಿಯಲ್ಲಿ ಮುಕ್ಕಾಲು ಭಾಗ ಸಾರಜನಕ, ಮತ್ತಿತರ ಅನಿಲಗಳಿರಲು ಕೇವಲ ಆಮ್ಲಜನಕವನಷ್ಟೇ ಹೀರುವ ಶ್ವಾಸನಾಳಕ್ಕೆ, ಮಾಸ್ಕ್ನಿಂದ ರಿಸ್ಕೇ ಆಗುತಿದೆ, ಮಾಸ್ಕ್ ಧರಿಸಿದಾಗ ನಿಶ್ವಾಸದಲಿ ಹೊರಹೋಗುವ ಇಂಗಾಲದ ಡೈ ಆಕ್ಸೈಡ್ ಮಾಸ್ಕ್ನಲ್ಲೇ ಬಹುಕಾಲ ಉಳಿದು, ಮತ್ತದೆ ಅನಿಲ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಇದೆ, ಮಾಸ್ಕ್ ಬದಲು ಅಂತರಪಾಲಿಸಿ, ಕರೊನಾ ಓಡಿಸಿ' ಎಂದು ಕವಿಸುತ ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ.
'ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು ವೈಯಕ್ತಿಕವಾಗಿ ಲಾಭದಾಯಕ' ಎನ್ನುತ್ತಾರೆ ಬಸವರಾಜು ಮೈಸೂರು.
'#ಮಾಸ್ಕ್_ಕಡ್ಡಾಯ ಮಾಡುವುದು ಒಳ್ಳೆಯದು. ಕಾರಣ ಕೇವಲ ಕರೊನಾ ಒಂದೇ ಅಲ್ಲ. ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲೆಲ್ಲಿಯೂ ಬರಿ ಧೂಳು ರಸ್ತೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಕರೊನಾ ಯಾವಾಗ ಸೃಷ್ಟಿ ಆಗುತ್ತದೆಯೇ ಗೊತ್ತಾಗುವುದಿಲ್ಲ. ಹಾಗಾಗಿ ಮಾಸ್ಕ್ ಕಡ್ಡಾಯ ಆದರೆ ಸೂಕ್ತ' ಎಂದು ರೇಖಾ ವಿ. ಸಿಂಗ್ ಬರೆದುಕೊಂಡಿದ್ದಾರೆ.
'ನಮ್ಮ ಅರೋಗ್ಯ ನಮ್ಮ ಕೈಯಲ್ಲಿ ಅನ್ನೋ ಹಾಗೆ ಮಾಸ್ಕ್ ಬಳಸೋದು ಬಿಡೋದು ಅವರ ಅವರ ವಿಚಾರ ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸೋದು ಉತ್ತಮ. ಆ ಅಲೆ ಬಂತು ಈಗ ಈ ಅಲೆ ಬಂತು ಅಂತ ಭಯದಲ್ಲಿ ಇರೋದಕ್ಕಿಂತ ನಮ್ಮ ನಮ್ಮ ಎಚ್ಚರಿಕೆಯಲ್ಲಿ ಇರೋದು ಉತ್ತಮ' ಎನ್ನುವುದು ಮಧು ಅವರ ಅಭಿಪ್ರಾಯ.
'ದೇಶದಲ್ಲಿ ಸುಮಾರು 1000 ಮತ್ತು ರಾಜ್ಯದಲ್ಲಿ 30 ಆಸುಪಾಸು ಕರೊನ ಪ್ರಕರಣಗಳಿವೆ! ನಿಮ್ಮ ಪ್ರಕಾರ ”ಮಾಸ್ಕ್” ಇನ್ನೂ ಅಗತ್ಯವಿದೆಯೇ? ಎಂಬ ಮಂಜುನಾಥ್ ಪಾಪಣ್ಣ ಅವರ ಪೋಲ್ಗೆ ಮಾಸ್ಕ್ ಅಗತ್ಯವಿದೆ ಎಂದೇ ಬಹುತೇಕರು ವೋಟ್ ಮಾಡಿದ್ದಾರೆ.