ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ

edukondalu
Published on

ಕೋಲಾರ: ಜಂಟಿ ಸರ್ವೇ ಕಾರ್ಯಕ್ಕಾಗಿ ಎದುರುದಾರರಿಗೆ ನೋಟಿಸ್ ಕೊಟ್ಟ ಮೇಲೆ ಕಾನೂನು ಹೋರಾಟ ಶುರುವಾಗುತ್ತದೆ. ತದ ನಂತರ ನಾವು ಸ್ಥಳಕ್ಕೆ ಬಾರದೆ ಇದ್ದರೆ ತಪ್ಪಾಗುತ್ತದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕಾಗಿ ಬಂದಿದ್ದು, ಎದುರುದಾರರು, ಡಿಸಿ, ಡಿಡಿಎಲ್‌ಆರ್ ಸಹ ಬಂದಿರುತ್ತಾರೆ ಅಂದುಕೊಂಡಿದ್ದೆ. ಆದರೆ ಎಲ್ಲರೂ ಗೈರಾಗಿದ್ದಾರೆ. ಈ ಬಗ್ಗೆ ಇಲಾಖೆ ಹಿರಿಯ ಅಽಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸರ್ವೇಯನ್ನು ಜ.2ಕ್ಕೆ ಮುಂದೂಡಿರುವ ಬಗ್ಗೆ ಮಾಹಿತಿ ಇಲ್ಲ. ಗುರುವಾರ ರಾತ್ರಿ ಸುಮಾರು ೭ ಗಂಟೆ ತನಕ ಕಚೇರಿಯಲ್ಲೇ ಇದ್ದೆ, ಇ ಮೇಲ್ ಅಥವಾ ಮೊಬೈಲ್‌ಗೂ ಬಂದಿಲ್ಲ, ದೂರವಾಣಿ ಕರೆ ಮೂಲಕವೂ ತಿಳಿಸಿಲ್ಲ. ಸರ್ಕಾರವೂ ಏನಂತ ಪತ್ರ ಕಳಿಸಿದೆ ಎಂಬುದು ಮಾಹಿತಿಯಿಲ್ಲ ಎಂದು ತಿಳಿಸಿದರು.

ಹೊಸಹುಡ್ಯ ಸಮೀಪದ ಜಿಂಗಾಲಗುಂಟೆ ಅರಣ್ಯ ಜಮೀನು ಒತ್ತುವರಿ ಪ್ರಕರಣ ಸಂಬಂಧ ಕೇಂದ್ರ ಅರಣ್ಯ ಇನ್‌ಸ್ಪೆಕ್ಟರ್ ಜನರಲ್ ಕಚೇರಿಯಿಂದ 3 ಪತ್ರಗಳು ಬರೆದಿದ್ದು, ಹೈಕೋರ್ಟ್ ಆದೇಶದ ಅನ್ವಯ ಏನು ಕ್ರಮವಹಿಸಿದ್ದೀರಾ ಎಂದು ಮಾಹಿತಿ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎದುರುದಾರರಿಗೆ ನೊಟೀಸ್ ನೀಡಲಾಗಿತ್ತು. ಈಗಾಗಲೇ ಸರ್ವೇಗೆ ದಿನಾಂಕ ನಿಗದಿಪಡಿಸಲಾಗಿತ್ತು. ಈಗ ಮತ್ತೆ ಮುಂದೂಡಿದ್ದಾರೆ ಎಂದರು.

ಡಿಸಿ, ಡಿಡಿಎಲ್, ಡಿಸಿಎಫ್ ಹಾಗೂ ಎದುರಾರರ ಹಾಜರಾತಿಯಲ್ಲಿ ಜಂಟಿ ಸರ್ವೇ ನಡೆಸಲು ನ್ಯಾಯಾಲಯ ಸೂಚಿಸಿದೆ. ಆದೇಶ ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿದೆ. ಇಂದಿನ ಬೆಳವಣಿಗೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮವಹಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net