ಖಾಕಿ ನೇಮಕದಲ್ಲಿ ತಾರತಮ್ಯ; ಎಸ್​ಐ ಹುದ್ದೆಗೆ ಸಿಕ್ಕ ವಯೋಮಿತಿ ಕಾನ್​ಸ್ಟೆಬಲ್​ಗಳಿಗಿಲ್ಲ

page 1 3
Published on

| ಕೀರ್ತಿನಾರಾಯಣ ಸಿ. 

ಬೆಂಗಳೂರು: ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿದ್ದ ವಯೋಮಿತಿ ಹೆಚ್ಚಿಸುವ ಮೂಲಕ ಎಸ್​ಐ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರ ಕಾನ್​ಸ್ಟೆಬಲ್ ನೇಮಕದ ವಯೋಮಿತಿ ಸಡಿಲಿಸದೆ ಸಾವಿರಾರು ಕಾನ್​ಸ್ಟೆಬಲ್ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಮಾಡಿದೆ. ತಾರತಮ್ಯ ನೀತಿ ಅನುಸರಿಸಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವಯೋಮಿತಿ ಸಡಿಲಿಸುವಂತೆ ಎಸ್​ಐ ಅಭ್ಯರ್ಥಿಗಳ ಜತೆಗೆ ಕಳೆದ 3 ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಕಾನ್​ಸ್ಟೆಬಲ್ ಉದ್ಯೋಗಾಕಾಂಕ್ಷಿಗಳ ಮನವಿಯನ್ನು ಪರಿಗಣಿಸದ ಸರ್ಕಾರ ಬರೀ ಎಸ್​ಐ ನೇಮಕಕ್ಕೆ ವಯೋಮಿತಿ ಸಡಿಲಿಸಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಟ್ಟಿದೆ. ಪಿಎಸ್​ಐ ಹುದ್ದೆಗೆ ಅತಿ ಹೆಚ್ಚೆಂದರೆ ಒಮ್ಮೆ 250 ಹುದ್ದೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಆದರೆ, 2 ರಿಂದ 6 ಸಾವಿರದವರೆಗೆ ಕಾನ್​ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಯೋಮಿತಿ ಕಡಿಮೆ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಸಾಮಾನ್ಯ ವರ್ಗಕ್ಕೆ ಗರಿಷ್ಠ 25 ವರ್ಷ, ಹಿಂ. ವರ್ಗ ಹಾಗೂ ಎಸ್ಸಿ-ಎಸ್ಟಿಗೆ 27 ವರ್ಷ ನಿಗದಿಪಡಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಸಾ.ವರ್ಗಕ್ಕೆ 28 ವರ್ಷ, ಹಿಂದುಳಿದ 31 ಹಾಗೂ ಎಸ್ಸಿ-ಎಸ್ಟಿ ವರ್ಗಕ್ಕೆ ಗರಿಷ್ಠ 33 ವರ್ಷ ಇದೆ. ಕರ್ನಾಟಕದಲ್ಲೂ ಹಿಂ.ವರ್ಗಕ್ಕೆ 30 ವರ್ಷ, ಎಸ್ಸಿ-ಎಸ್ಟಿಗೆ 33 ವರ್ಷ ನಿಗದಿಪಡಿಸಬೇಕು ಎಂಬ ಕೂಗು ವ್ಯಕ್ತವಾಗಿದೆ.

ಗ್ರಾಮೀಣ ಭಾಗದಲ್ಲಿ ಪದವಿಗಿಂತ ಪಿಯು ಓದಿದವರ ಸಂಖ್ಯೆ ಜಾಸ್ತಿ ಇರುತ್ತದೆ. ಹೀಗಾಗಿ ಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸುವವರಿಗಿಂಥ ಕಾನ್​ಸ್ಟೆಬಲ್ ಹುದ್ದೆ ಆಕಾಂಕ್ಷಿಗಳು ಹೆಚ್ಚು. ವಯೋಮಿತಿ ಸಡಿಲಿಸಿದರೆ ಅನುಕೂಲವಾಗುತ್ತದೆ. ಈಗಲೂ ಸಿವಿಲ್, ಕೆಎಸ್ಸಾರ್ಪಿ, ಸಿಎಆರ್ ಮತ್ತು ಡಿಎಆರ್ ಘಟಕ ಸೇರಿ ಇಲಾಖೆಯಲ್ಲಿ ಖಾಲಿ ಉಳಿದಿರುವ 6848 ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಜೂ.26 ಕೊನೇ ದಿನಾಂಕವಾಗಿದ್ದು, ಅಷ್ಟರಲ್ಲಿ ವಯೋಮಿತಿ ಸಡಿಲಿಸಿದರೆ ಉಪಯೋಗವಾಗಲಿದೆ ಎಂದು ಕಾನ್​ಸ್ಟೆಬಲ್ ಹುದ್ದೆ ಆಕಾಂಕ್ಷಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸರ್ಕಾರವೇ ಪತನವಾಯ್ತು!: ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನಿಂದಲೂ ವಯೋಮಿತಿ ಸಡಿಲಿಕೆಗೆ ಮನವಿ ಕೊಡಲಾಗುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾನ್​ಸ್ಟೆಬಲ್ ಹುದ್ದೆ ನೇಮಕಾತಿ ವಯೋಮಿತಿ ಹೆಚ್ಚಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ಪೂರ್ಣಗೊಳ್ಳುವಷ್ಟರಲ್ಲಿ ಸರ್ಕಾರವೇ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಭ್ಯರ್ಥಿಗಳು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿ ಹಲವು ಬಾರಿ ಮನವಿ ಪತ್ರ ಕೊಟ್ಟಿದ್ದರು. ಮನವಿ ಪುರಸ್ಕರಿಸುವ ಭರವಸೆ ಕೊಟ್ಟಿದ್ದರಾದರೂ ಈಡೇರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net