

ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಳ್ಳೆಯ ಕೊಬ್ಬನ್ನು ಸೇವಿಸದೇ ಇರುವುದು, ಕ್ಯಾಲ್ಸಿಯಂ, ಮೆಗ್ನೀಷಿಯಂ ಮುಂತಾದ ಖನಿಜಾಂಶಗಳು, ಸಿ, ಡಿ ಮತ್ತು ಕೆ ವಿಟಮಿನ್ಗಳ ಕೊರತೆಯಿಂದ ಸೊಂಟ ನೋವಿನ ಸಮಸ್ಯೆ ಬರುತ್ತದೆ. ತುಂಬಾ ಹೊತ್ತು ಕುಳಿತಲ್ಲಿಯೇ ಕುಳಿತಿರುವುದು, ಅತಿಯಾಗಿ ಭಾರವನ್ನು ಎತ್ತುವುದು, ಅತಿ ಕಡಿಮೆ ಅಥವಾ ಅತಿ ಹೆಚ್ಚು ವ್ಯಾಯಾಮ ಮಾಡುವುದು ಮತ್ತು ಮಾನಸಿಕ ಒತ್ತಡಗಳು ಕೂಡ ಸೊಂಟ ನೋವು ಹೆಚ್ಚಾಗಲು ಕಾರಣವಾಗಿವೆ. ಹಾಗಾಗಿ ಎಲ್ಲ ರೀತಿಯ ಪೋಷಕಾಂಶವಿರುವ ಆಹಾರ ಸೇವನೆ ಅತ್ಯಂತ ಮುಖ್ಯವಾದದ್ದು. ಜತೆಗೆ ನಿತ್ಯವೂ ಯೋಗಾಸನ ಅಥವಾ ಬೆನ್ನನ್ನು ಸುಸ್ಥಿತಿಯಲ್ಲಿಡುವ ವ್ಯಾಯಾಮಗಳಿಂದಲೂ ಸೊಂಟ ನೋವು ಅಥವಾ ಡಿಸ್ಕ್ ಸಮಸ್ಯೆಗಳನ್ನು ತಡೆಯಬಹುದು. ಆದರೆ ಸಮಸ್ಯೆಯಿದೆ ಎಂದು ಗೊತ್ತಾದ ನಂತರ ವೈದ್ಯರು, ಯೋಗ ಗುರುಗಳು ಅಥವಾ ಫಿಸಿಯೋಥರೆಪಿಸ್ಟ್ ಸಲಹೆಯ ಮೇಲೆಯೇ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ಪ್ರಾರಂಭಿಕ ಹಂತದಲ್ಲಿರುವ ಸೊಂಟದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಆಯುರ್ವೆದದ ಪ್ರಕಾರ ನಿತ್ಯವೂ ಎಣ್ಣೆ ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಸೊಂಟನೋವನ್ನು ತಡೆಯಬಹುದು.
ಕೆಲಸ ಮಾಡುವಾಗ ಅಥವಾ ಬೇರೆ ಯಾವುದೇ ಕಾರಣಕ್ಕೆ ಕುಳಿತಿರುವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸೊಂಟದ ಮೇಲಿನ ಒತ್ತಡ ತುಂಬಾ ಕಡಿಮೆ ಆಗುತ್ತದೆ. ಕೆಲಸದ ಮಧ್ಯದಲ್ಲಿ ಆಗಾಗ ನಿಂತು ಹಿಂದೆ ಬಗ್ಗುವ ವ್ಯಾಯಾಮ ಮಾಡಬೇಕು. ಭಾರ ಎತ್ತುವಾಗ ಮುಂದೆ ಬಗ್ಗಿ ಭಾರ ಎತ್ತಬಾರದು. ತುದಿಗಾಲಲ್ಲಿ ಕುಳಿತು ವಸ್ತುವನ್ನು ದೇಹದ ಸಮೀಪಕ್ಕೆ ಇಟ್ಟುಕೊಂಡು ನಿಧಾನವಾಗಿ ಮೇಲೇಳಬೇಕು. ಏಳುವಾಗ ದೇಹವನ್ನು ನೇರವಾಗಿಟ್ಟುಕೊಳ್ಳಬೇಕು. ಮೋಟಾರ್ ಸೈಕಲ್ಗಳನ್ನು ಅತಿಯಾಗಿ ಬಳಸುವುದು ಕೂಡ ಡಿಸ್ಕ್ಗಳಿಗೆ ತೊಂದರೆಯಾಗಲು ಮುಖ್ಯ ಕಾರಣ. ಹಾಗಾಗಿ ಏರು ತಗ್ಗುಗಳು ಇರುವ ರಸ್ತೆಗಳಲ್ಲಿ ಮೋಟಾರ್ ಸೈಕಲ್ಗಳನ್ನು ಸಾಧ್ಯವಾದಷ್ಟು ನಿಧಾನವಾಗಿ ಚಲಾಯಿಸುವುದು ಒಳ್ಳೆಯದು.
ಸೊಂಟ ನೋವು ಹೆಚ್ಚಿದ್ದಾಗ ಒಂದು ಮ್ಯಾಟ್ ಅಥವಾ ಕಂಬಳಿಯ ಮೇಲೆ ಬೆನ್ನು ಕೆಳಗಿರುವಂತೆ ಮಲಗಿ ಸೊಂಟ ಮತ್ತು ಮಂಡಿಯಲ್ಲಿ 90 ಡಿಗ್ರಿ ಆಗುವಂತೆ ಕಾಲುಗಳನ್ನು ಬಗ್ಗಿಸಿ ಮಂಡಿಯ ಮುಂದಿನ ಭಾಗವನ್ನು ಕುರ್ಚಿಯ ಮೇಲೆ ಇಟ್ಟು ಆರಾಮವಾಗಿ ಹತ್ತರಿಂದ ಹದಿನೈದು ನಿಮಿಷ ಮಲಗಿಕೊಳ್ಳಬೇಕು ಇದರಿಂದ ಸೊಂಟದ ಡಿಸ್ಕ್ಗಳಿಗೆ ಮತ್ತು ಅಲ್ಲಿಂದ ಹಾದು ಬರುವ ನರಗಳಿಗೆ ವಿಶ್ರಾಂತಿ ಸಿಕ್ಕು ನೋವು ಕಡಿಮೆಯಾಗುತ್ತದೆ. ಉಗುರು ಬೆಚ್ಚಗಿನ ನೀರಿನ ಕಟಿಸ್ನಾನ ಅಂದರೆ ಒಂದು ಅಗಲವಾದ ಟಬ್ ನಲ್ಲಿ ಉಗುರು ಬೆಚ್ಚಗಿನ ನೀರು ಹಾಕಿ ಅದರಲ್ಲಿ ಪ್ರತಿನಿತ್ಯ 10 ನಿಮಿಷ ಕುಳಿತುಕೊಳ್ಳುವುದರಿಂದ ಸೊಂಟಕ್ಕೆ ಅನುಕೂಲವಾಗುತ್ತದೆ. ಈ ರೀತಿ 45 ದಿನ ಮಾಡಿದರೆ ಫಲಿತಾಂಶವನ್ನು ಕಾಣಬಹುದು. ಇದಾದ ನಂತರ ಸಾಧ್ಯವಾದರೆ ಮಣ್ಣಿನ ಸ್ನಾನವನ್ನು ಮಾಡಿಕೊಳ್ಳಬಹುದು. ಅಂದರೆ ಹುತ್ತದ ಮಣ್ಣನ್ನು ತಂದು ನೀರಿನಲ್ಲಿ ಕಲಸಿ ಸ್ವಲ್ಪ ಬಿಸಿ ಮಾಡಿ ಸೊಂಟ ನೋವು ಇರುವ ಭಾಗದ ಮೇಲೆ ತೆಳುವಾಗಿ ಹಚ್ಚಿಕೊಳ್ಳುವುದು. ಅದು ಒಣಗಿದ ನಂತರ ಬಿಸಿನೀರಿನಲ್ಲಿ ತೊಳೆದುಕೊಳ್ಳಬೇಕು. ವಾರಕ್ಕೊಮ್ಮೆ ಅಥವಾ ಕನಿಷ್ಠ ತಿಂಗಳಿಗೊಮ್ಮೆ ಹರಳೆಣ್ಣೆಯನ್ನು ಕುಡಿದು ಭೇದಿ ಮಾಡಿಕೊಳ್ಳುವುದರಿಂದಲೂ ಭವಿಷ್ಯದಲ್ಲಿ ಬರಬಹುದಾದ ಸೊಂಟ ನೋವಿನ ಸಮಸ್ಯೆಯನ್ನು ತಡೆಯಲು ಸಹಾಯವಾಗುತ್ತದೆ.