ಸಿಗದ ತವರು, ಅಸಮಾಧಾನ ಜೋರು: ಬಿಜೆಪಿಯಲ್ಲಿ ಉಸ್ತುವಾರಿ ಅಸಮಾಧಾನ ಉಲ್ಬಣ, ಬದಲಾವಣೆಗೆ ಹಲವು ಸಚಿವರ ಬೇಸರ

BJP
Published on

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಒತ್ತಡ, ನಿಗಮ-ಮಂಡಳಿಗಳ ನೇಮಕ ವಿಳಂಬ ಈಗಾಗಲೆ ಆಡಳಿತ ಪಕ್ಷ ಬಿಜೆಪಿಯಲ್ಲಿ ಅಸಮಾಧಾನ ಹುಟ್ಟಿಸಿರುವ ನಡುವೆ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಅಪಸ್ವರಕ್ಕೆ ಕಾರಣವಾಗಿದೆ. ತವರು ಜಿಲ್ಲೆ ಕೈತಪ್ಪಿರುವುದು ಹಲವು ಸಚಿವರಿಗೆ ತಳಮಳ ಉಂಟುಮಾಡಿದ್ದು ಹೇಳಲೂ ಆಗದೆ, ಸುಮ್ಮನಿರಲೂ ಆಗದೆ ಚಡಪಡಿಸುತ್ತಿದ್ದಾರೆ.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ 6 ತಿಂಗಳು ಪೂರೈಸುತ್ತಿರುವ ಹೊತ್ತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ. ಅನುಸರಿಸಿದ ಮಾನದಂಡ ಗಮನಿಸಿದರೆ ಎಲ್ಲವೂ ವರಿಷ್ಠರ ಆಣತಿಯಂತೆ ನಡೆದಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ಆದರೆ ಕರ್ನಾಟಕದ ರಾಜಕೀಯ ನಕ್ಷೆ, ನೆಲೆ ವಿಶಿಷ್ಟವಾಗಿದೆ. ಉತ್ತರದ ಪ್ರಯೋಗಗಳನ್ನು ರಾಜ್ಯದ ಮೇಲೆ ಹೇರಿದರೆ ನಿರೀಕ್ಷಿತ ಫಲ ಕೊಡದು ಎನ್ನುವುದು ಡಿಸಿಎಂ ಹುದ್ದೆಗಳ ಸೃಜನೆಯಿಂದಲೇ ವೇದ್ಯವಾಗಿದೆ. ಆದರೂ ಸ್ವಂತ ಜಿಲ್ಲೆ ಬಿಟ್ಟು, ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ನೇಮಕದಲ್ಲಿ ಯಾವ ಕಾರ್ಯತಂತ್ರ, ನೀತಿ ಅಡಗಿದೆಯೋ ತಿಳಿಯದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ, ತಾ.ಪಂ. ಚುನಾವಣೆ ತಲೆ ಮೇಲಿಟ್ಟುಕೊಂಡು ಈ ಕಸರತ್ತಿಗೆ ಕೈಹಾಕಿರುವುದು ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ. ಉಸ್ತುವಾರಿಗಳ ಬದಲಾವಣೆ ಸಹಜ, ಯಾರಿಗೂ ಕೂಡ ಪಾರಮ್ಯ ಮೆರೆಯುವುದಕ್ಕೆ ಅವಕಾಶ ಇಲ್ಲ ಎನ್ನುವುದು ನೇಮಕದ ಹಿಂದಿರುವ ಸಂದೇಶವಾಗಿದೆ. ವಿಧಾನ ಪರಿಷತ್, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಡೆ ಅರಿತೂ ಇಂತಹ ಪ್ರಯೋಗಕ್ಕೆ ಕೈಹಾಕಿರುವುದು ಬೇಸರಕ್ಕೆ ಕಾರಣವಾಗಿದೆ.

ವಿಧಾನಸಭೆ 2023ರ ಸಾರ್ವತ್ರಿಕ ಚುನಾವಣೆ ಪೂರ್ವ ತಯಾರಿಗೆ ಏಳೆಂಟು ತಿಂಗಳು ಉಳಿದಿರುವಾಗ ಬೇರೆ ಜಿಲ್ಲೆಗೆ ದಬ್ಬಿದರೆ ನಿರೀಕ್ಷಿತ ಫಲ ಸಿಗುವುದು ಅನುಮಾನ. ವೈಯಕ್ತಿಕ ವರ್ಚಸ್ಸು, ಕ್ಷೇತ್ರದ ಜನರ ಜತೆಗೆ ನಿಕಟ ಸಂಪರ್ಕವುಳ್ಳವರು ಗೆಲುವು ಸಾಧಿಸುತ್ತಾರೆ. ಬೇರೆ ಜಿಲ್ಲೆಗೆ ವರ್ಗಾಯಿಸುವುದರಿಂದ ವೈಯಕ್ತಿಕ ನಷ್ಟವೇನಿಲ್ಲ. ಆದರೆ ಅಂತಿಮವಾಗಿ ಆಯಾ ಜಿಲ್ಲೆ ಅಭಿವೃದ್ಧಿಗೆ ಹಿನ್ನಡೆ, ಪಕ್ಷಕ್ಕೂ ಹಿನ್ನಡೆಯಾಗಲಿದೆ ಎನ್ನುವುದು ಅಸಮಾಧಾನಿತರ ಕಳವಳದ ತಿರುಳು ಎಂದು ಮೂಲಗಳು ತಿಳಿಸಿವೆ.

ಅತೃಪ್ತಿ ತರಹೇವಾರಿ: ಹಲವರು ಅತೃಪ್ತಿಯಿಂದ ನಿಡುಸುಯ್ಯುತ್ತಿದ್ದರೆ, ಅಶ್ವತ್ಥ ನಾರಾಯಣ ಖುಷಿಯಲ್ಲಿದ್ದಾರೆ. ಸಿಎಂ ತೀರ್ವನವೆಂದು ಸುಧಾಕರ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ್ದಾರೆ. ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ, ಹಾಲಪ್ಪ ಆಚಾರ್ ಸೇರಿ ಹಲವು ಸಂತಸ ಮಿಶ್ರಿತ ಬುದ್ಧಿಪೂರ್ವಕ ಉತ್ತರ ನೀಡಿದ್ದಾರೆ. ಸಿಎಂ ಅಧಿಕೃತ ನಿವಾಸ ರೇಸ್​ವ್ಯೂ ಕಾಟೇಜ್​ಗೆ ಮಂಗಳವಾರ ದೌಡಾಯಿಸಿದ್ದ ಎಂಟಿಬಿ ನಾಗರಾಜ್ ಅವರಿಗೆ ಬೊಮ್ಮಾಯಿ ಸಂತೈಸಿ, ತಮ್ಮ ಕಾರಿನಲ್ಲಿಯೇ ವಿಧಾನಸೌಧಕ್ಕೆ ಕರೆದುಕೊಂಡು ಬಂದರು. ಆನಂದ್ ಸಿಂಗ್ ಏನನ್ನೂ ಹೇಳದಿದ್ದರೂ ಸಿಡಿದೆದ್ದ ಅಭಿಮಾನಿಗಳು, ಬೆಂಬಲಿಗರಿಗೆ ಸಮಾಧಾನ ಮಾಡಲು ಪ್ರಯತ್ನಿಸಿಲ್ಲ. ಉಸ್ತುವಾರಿ ಕೈತಪ್ಪಿರುವುದನ್ನು ದೊಡ್ಡ ವಿಷಯ ಮಾಡಬೇಕಾದ ಅಗತ್ಯವಿಲ್ಲ. ಸಿಎಂ ಹಾಗೂ ಪಕ್ಷ ತೆಗೆದುಕೊಳ್ಳುವ ತೀರ್ವನಕ್ಕೆ ಬದ್ಧ. ಏಕಾಏಕಿ ಏಕೆ ಬದಲಾವಣೆ ಮಾಡಿದ್ದಾರೋ ಗೊತ್ತಿಲ್ಲ. ನೋವಿಲ್ಲವೆಂದು ಹೇಳಿದರೆ ತಪ್ಪಾಗುತ್ತದೆ ಎನ್ನುವ ಮೂಲಕ ಜೆ.ಸಿ.ಮಾಧುಸ್ವಾಮಿ ತಮ್ಮ ಅತೃಪ್ತಿ ಹೊರ ಹಾಕಿದ್ದಾರೆ.

ಸ್ವಂತ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿರುವುದು ನಮ್ಮ ಪಕ್ಷದ ರಾಷ್ಟ್ರೀಯ ನೀತಿ. ಎಲ್ಲ ಸಚಿವರೊಂದಿಗೆ ರ್ಚಚಿಸಿದ ನಂತರ ಜಿಲ್ಲಾ ಉಸ್ತುವಾರಿ ನೇಮಕ ನಿರ್ಧಾರವಾಗಿದೆ. ಯಾರಿಗೂ ಅಸಮಾಧಾನವಿಲ್ಲ, ಎಲ್ಲರೂ ಒಗ್ಗಟ್ಟಿನಿಂದ ಜನಪರ ಕೆಲಸ ಮಾಡಲು ಬದ್ಧರಾಗಿದ್ದೇವೆ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುವಂತಹ ಬಹಿರಂಗ ಹೇಳಿಕೆ ಸಹಿಸಲಾಗದು. ಅದೇನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ರ್ಚಚಿಸಲಿ. ಪದೇ ಪದೆ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ರಾಜ್ಯ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿ, ಸ್ಪಷ್ಟೀಕರಣ ಪಡೆದು ಕೇಂದ್ರ ಸಮಿತಿಗೆ ವರದಿ ಸಲ್ಲಿಸಲಾಗಿದೆ.

| ಬಿಜೆಪಿ ರಾಜ್ಯಾಧ್ಯಕ್ಷ

ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಸ್ವಂತ ಜಿಲ್ಲೆ ಉಸ್ತುವಾರಿ ನೀಡಿದ್ದರೆ ಚೆನ್ನಾಗಿತ್ತು. ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಕಾರಣಕ್ಕೆ ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು. ವರಿಷ್ಠರ ನಿರ್ಧಾರವನ್ನು ನಾವು ಒಪ್ಪಿಕೊಳ್ಳಲೇಬೇಕು.

| ಎಂ.ಟಿ.ಬಿ.ನಾಗರಾಜ್ ಪೌರಾಡಳಿತ, ಸಣ್ಣ ಕೈಗಾರಿಕೆ ಸಚಿವ

ನನಗೆ ಚಿಕ್ಕಮಗಳೂರು ಜಿಲ್ಲೆ ಬಗ್ಗೆ ಆಸಕ್ತಿ ಇತ್ತು. ಆದರೆ ಸಿಎಂ ತುಮಕೂರು ಜಿಲ್ಲೆ ಉಸ್ತುವಾರಿ ನೀಡಿದ್ದಾರೆ. ಬಯಲು ಸೀಮೆ ಜಿಲ್ಲೆಯಲ್ಲಿ ಕೆಲಸ ಮಾಡಲು ತೊಂದರೆ ಇಲ್ಲ. ಒಂದು ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇವೆ. ಈಗ ಇನ್ನೊಂದು ಜಿಲ್ಲೆಯಲ್ಲಿಯೂ ಕೆಲಸ ಮಾಡುತ್ತೇವೆ.

| ಆರಗ ಜ್ಞಾನೇಂದ್ರ ಗೃಹ ಸಚಿವ

ಸ್ಥಳೀಯ ಸಚಿವರಿಗೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡುವ ಪ್ರಯೋಗವನ್ನು ಮಾಡಲಾಗಿದೆ. ಕಳಂಕವಿಲ್ಲದೇ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಇದೇ ಕಾರಣಕ್ಕೆ ನನಗೆ ದಾವಣಗೆರೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ.

| ಬೈರತಿ ಬಸವರಾಜ ನಗರಾಭಿವೃದ್ಧಿ ಸಚಿವ

ಆಡಳಿತ ವ್ಯವಸ್ಥೆಯಲ್ಲಿ ಉಸ್ತುವಾರಿಗೆ ಆ ಜಿಲ್ಲೆ ಬೇಕು, ಈ ಜಿಲ್ಲೆ ಬೇಕೆಂದು ಚರ್ಚೆಯಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದು ಆಗಬಾರದು. ಆದರೂ ಆಗುತ್ತಿದೆ. ನಾನು ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಈಗ ಚಿಕ್ಕಮಗಳೂರು ಉಸ್ತುವಾರಿ ವಹಿಸಲಾಗಿದೆ. ಇದಕ್ಕೆ ವಿಶೇಷತೆ ಕಲ್ಪಿಸುವ ಅಗತ್ಯವಿಲ್ಲ.

| ಕೆ.ಎಸ್. ಈಶ್ವರಪ್ಪ ಸಚಿವ

ಕಾಂಗ್ರೆಸ್ ನಾಯಕರಿಗೆ ಅಭದ್ರತೆ ಭೀತಿ

ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅಭದ್ರತೆಯ ಭೀತಿ ಕಾಡುತ್ತಿದೆ. ತಿಂಗಳಿಗೊಮ್ಮೆ ಅವರು, ಇವರು ಬರುತ್ತಾರೆ ಎಂದು ಹೇಳಿಕೆ ನೀಡಿ ಅಭದ್ರತೆಯಿಂದ ಹೊರ ಬರಲು ಪ್ರಯತ್ನಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಅವರು, ಬಿಜೆಪಿಯವರು ಪಕ್ಷ ತೊರೆದು ವಲಸೆ ಬರಲು ಸಿದ್ಧರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷದ ನಾಯಕರಿಬ್ಬರ ಇಂತಹ ಹೇಳಿಕೆಗಳು ಹೊಸದೇನಲ್ಲ. ಬಿಜೆಪಿಯಿಂದ ಯಾರೂ ವಲಸೆ ಹೋಗುವುದಿಲ್ಲ. ಕಾಂಗ್ರೆಸ್ ಸಹವಾಸವೇ ಸಾಕು ಎಂದು ಬಿಜೆಪಿಗೆ ಸೇರಿದವರೂ ಇದ್ದಾರೆ. ಕಾಂಗ್ರೆಸ್​ನೊಳಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ನಾಯಕತ್ವಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಈ ಕಾರಣಕ್ಕೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪಾಳಿ ಪ್ರಕಾರ ಬೇರೆ ಪಕ್ಷದವರು ತಮ್ಮೆಡೆ ಬರುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಲ ನಿಶ್ಚಿತ: ಕೆಲವು ರಾಜಕೀಯ ಬೆಳವಣಿಗೆಗಳ ಬಗ್ಗೆ ಈಗಲೇ ವ್ಯಾಖ್ಯಾನ ಮಾಡುವುದಿಲ್ಲ. ಮುಂದಿನ ಬೆಳವಣಿಗೆ ಏನೆಂಬುದು ಕಾದು ನೋಡಿ. ಬಿಜೆಪಿ ಬಲ ಮತ್ತಷ್ಟು ವೃದ್ಧಿಸುವುದು ನಿಶ್ಚಿತ. ಯಾವ ರೀತಿ ಬಲವರ್ಧಿಸಿಕೊಳ್ಳಲಿದೆ ಎಂಬುದು ಕಾದು ನೋಡಿ ಎಂದು ಸಿಎಂ ಬೊಮ್ಮಾಯಿ ನಿಗೂಢವಾಗಿ ಹೇಳಿದರು.

ವಾರದೊಳಗೆ ನಿಗಮ-ಮಂಡಳಿ ಪಟ್ಟಿ

ರಾಜ್ಯದ ನಿಗಮ-ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರು/ ಸದಸ್ಯರ ನೇಮಕ ಪಟ್ಟಿ ಅಂತಿಮಗೊಳಿಸಿ ವಾರದೊಳಗೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತು ವರಿಷ್ಠರು, ಸಿಎಂ ನಿರ್ಧಾರ ಮಾಡಲಿದ್ದಾರೆ. ಈ ಕುರಿತು ಪಕ್ಷದ ಶಾಸಕರು ಹೇಳಿಕೆ ನೀಡುವಂತಿಲ್ಲ ಎಂದು ಎಚ್ಚರಿಸಿದರು. ಉಸ್ತುವಾರಿ ಸಚಿವರ ನೇಮಕದಲ್ಲಿ ಈ ಬಾರಿ ಹೊಸ ರೀತಿ ಅನುಸರಿಸಲಾಗಿದೆ. ಹಿರಿಯ ಸಚಿವರಾದ ಆರ್.ಅಶೋಕ್ ಮತ್ತು ಜೆ.ಸಿ.ಮಾಧುಸ್ವಾಮಿ ಅವರಿಗೆ ದೊಡ್ಡ ಜವಾಬ್ದಾರಿಯಿದೆ ಎಂದರು. ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುವ ಮೂಲಕ ಅತಂತ್ರ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದರು.

ಆಪರೇಷನ್ ಕಮಲದ ಸುಳಿವು ನೀಡಿದ ರಮೇಶ್: ಕಾಂಗ್ರೆಸ್ ಒಟ್ಟು 36 ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ತಾಂತ್ರಿಕ ಕಾರಣಗಳಿಗಾಗಿ ಕೆಲವರು ಬಿಜೆಪಿಗೆ ಬರಲಾಗಿಲ್ಲ. ಈಗಲೂ ನನ್ನ ಜತೆಗೆ ಹಲವು ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಪಕ್ಷದ ವರಿಷ್ಠರ ಸೂಚನೆಯಂತೆ ಮುಂದುವರಿಯುವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮೂಲಕ ಮತ್ತೆ ‘ಆಪರೇಷನ್ ಕಮಲ’ದ ಕಿಡಿಹೊತ್ತಿಸಿದ್ದಾರೆ. ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪಕ್ಷಕ್ಕೆ ಬರಲು ಸಿದ್ಧರಿರುವ ಶಾಸಕರ ಪೈಕಿ ತವರು ಜಿಲ್ಲೆಯ ಮೂವರಿದ್ದಾರೆ. ಆದರೆ ಒಬ್ಬರಿಗೆ ಮಾತ್ರ ನನ್ನ ವಿರೋಧವಿದ್ದು, ಜೆಡಿಎಸ್​ನ ಮೂವರು ಶಾಸಕರು ಸಂಪರ್ಕದಲ್ಲಿದ್ದರೂ ಅವರನ್ನು ಸೆಳೆಯುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net