ಕೊಳಚೆ ನೀರು ರಸ್ತೆ ಮೇಲೆ; ಸಾರ್ವಜನಿಕರಿಗೆ ತೊಂದರೆ

4-RNR-01
Published on

ರಾಣೆಬೆನ್ನೂರ: ನಗರದ ಮುನ್ಸಿಪಲ್​ ಮೈದಾನದ ಬಳಿ ಚರಂಡಿ ಒಡೆದು ಹೋಗಿದ್ದು, ಚರಂಡಿ ನೀರು ಹಳೇ ಪಿ.ಬಿ. ರಸ್ತೆ ಮೇಲೆ ಹರಿಯುತ್ತಿದೆ. ಆದರೆ, ಇದನ್ನು ದುರಸ್ತಿ ಪಡಿಸಬೇಕಾದ ನಗರಸಭೆ ಅಧಿಕಾರಿಗಳು ಗಮನ ಹರಿಸದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಈ ರಸ್ತೆ ಮಾರ್ಗದಲ್ಲಿ ಬ್ಯಾಡಗಿ, ಕದರಮಂಡಲಗಿ, ಹಾವೇರಿ, ಹುಬ್ಬಳ್ಳಿ ಕಡೆಗೆ ತೆರಳುವ ಬಸ್​ಗಳ ನಿಲ್ದಾಣವಿದೆ. ಗ್ರಾಮೀಣ ಭಾಗದ ಪ್ರಯಾಣಿಕರು, ವಿದ್ಯಾಥಿರ್ಗಳು ಇದೇ ನಿಲ್ದಾಣದಲ್ಲಿ ನಿಂತು ಬಸ್​ ಹತ್ತುತ್ತಾರೆ. ಇದೀಗ ಚರಂಡಿ ನೀರು ನಿಲ್ದಾಣದಲ್ಲಿಯೆ ಹರಿಯುತ್ತಿರುವ ಕಾರಣ ಪ್ರಯಾಣಿಕರು ರಸ್ತೆ ಮಧ್ಯೆದಲ್ಲಿ ನಿಂತು ಬಸ್​ ಹತ್ತುವ ಪರಿಸ್ಥಿತಿ ಎದುರಾಗಿದೆ.
ಚರಂಡಿ ನೀರು ರಸ್ತೆ ಮೇಲೆ ಹರಿಯುವ ಕಾರಣ ವಾಹನಗಳು ಓಡಾಟದಿಂದ ಅಕ್ಕಪಕ್ಕದಲ್ಲಿ ನಿಂತ ಜನರಿಗೆ ಚರಂಡಿ ನೀರು ಸಿಡಿದು ಜಗಳಗಳಿಗೆ ಎಡೆಮಾಡಿಕೊಡುತ್ತಿದೆ. ಇದೇ ಮಾರ್ಗದಲ್ಲಿ ನಿತ್ಯವೂ ನಗರಸಭೆಯ ಅಧಿಕಾರಿಗಳು, ಪರಿಸರ ವಿಭಾಗದ ಅಧಿಕಾರಿಗಳು ಓಡಾಡುತ್ತಾರೆ. ಆದರೆ, ಚರಂಡಿ ಒಡೆದು ನೀರು ಹರಿಯುತ್ತಿರುವುದನ್ನು ದುರಸ್ತಿ ಪಡಿಸಲು ಯಾವ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆದ್ದರಿಂದ ನಗರಸಭೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಒಡೆದಿರುವ ಚರಂಡಿಯನ್ನು ದುರಸ್ತಿ ಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net