

ನಿರ್ದೇಶಕ ಪ್ರೇಮ್ ಸಿನಿಮಾ ಅಂದ ಮೇಲೆ ಅಲ್ಲಿನ ಅಮ್ಮನ ಸೆಂಟಿಮೆಂಟ್ ಇರಲೇಬೇಕು. ಅವರ ಪ್ರತಿ ಸಿನಿಮಾದಲ್ಲಿ ಅದು ಕಡ್ಡಾಯ. ಜತೆಗೆ ಅಮ್ಮನ ಕುರಿತಾದ ಹಾಡೂ ಸಹ ಫಿಕ್ಸ್. ಆದರೆ, ಇತ್ತೀಚೆಗಷ್ಟೇ ಇದೇ ಪ್ರೇಮ್ ಅಮ್ಮನನ್ನು ಕಳೆದುಕೊಂಡಿದ್ದಾರೆ. ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾಗ್ಯಮ್ಮ ನಿಧನರಾಗಿದ್ದರು.
ಇದೀಗ ತಾಯಿಯನ್ನು ಪ್ರೇಮ್ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಹುಟ್ಟಿದ್ರೆ ಮತ್ತೊಮ್ಮೆ ನಿನ್ನ ಹೊಟ್ಟೆಯಲ್ಲಿ ಎಂದು ಭಾವುಕರಾಗಿದ್ದಾರೆ. ‘ನಾನ್ ಎಷ್ಟೇ ಹೋರಾಟ ಮಾಡಿದ್ರು ಕೊನೆಗೂ ನಿನ್ನನ್ನ ಉಳಿಸ್ಕೊಳಕ್ ಆಗ್ಲಿಲ್ಲ.. ನಿನ್ನ ಋಣ ತೀರ್ಸೋಕ್ ಮತ್ತೆ ನಿನ್ ಹೊಟ್ಟೇಲಿ ಹುಟ್ಟಕ್ಕ್ ನಂಗ್ ಒಂದ್ ಅವಕಾಶ ಮಾಡ್ಕೊಡು, ಯಾವತ್ತು ಕಾಯ್ತಿರ್ತೀನಿ.. ಮಿಸ್ ಯು ಅಮ್ಮ.. ’ ಎಂದು ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಒಂದಾದರು ರಮ್ಯಾ- ರಕ್ಷಿತಾ
ಭಾಗ್ಯಮ್ಮ ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ಅವರು ಲ್ಯುಕೇಮಿಯಾ ಕ್ಯಾನ್ಸರ್ ನಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದರು. ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಭಾಗ್ಯಮ್ಮ ಅವರಿಗೆ ಪ್ರೇಮ್ ಮತ್ತು ಅರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.