

ಶಿವಮೊಗ್ಗ: ಸಹ್ಯಾದ್ರಿ ರಂಗ ತರಂಗ, ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗದಲ್ಲಿ ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟ ಗಾಥೆ ಕುರಿತ ಡೈರೆಕ್ಟರ್ ಆ್ಯಕ್ಷನ್ ಹೊಸ ನಾಟಕ ಜೂ.9ರಂದು ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಿರ್ದೇಶಕ ಕಾಂತೇಶ್ ಕದರಮಂಡಲಗಿ ತಿಳಿಸಿದರು.
ವಿಶ್ವ ಮಾರಾಟ ಸಂಘಟನೆ ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತದ ರೈತ ತನ್ನ ಅಸ್ತಿತ್ವ ಕಳೆದುಕೊಂಡಿದ್ದಾನೆ. ಇತ್ತೀಚೆಗೆ ವರ್ಷಗಟ್ಟೆಲೇ ನಡೆದ ರೈತ ಚಳವಳಿ ಮತ್ತು ಸರ್ಕಾರಗಳು ಅತ್ತ ಗಮನ ಹರಿಸದಿರುವುದು ಇದಕ್ಕೆ ಪುರಾವೆ. ಆದ್ದರಿಂದ ಪ್ರತಿಯೊಬ್ಬ ರೈತನೂ ಎಂ.ಡಿ.ನಂಜುಂಡಸ್ವಾಮಿಯನ್ನು ಅವಾಹನೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಟರಾಜ ಹುಳಿಯಾರ್ ನಾಟಕ ರಚನೆ ಮಾಡಿದ್ದು ಕೆ.ಯುವರಾಜ್ ಗಾಯನ, ರಾಘವೇಂದ್ರ ಪ್ರಭು ಸಂಗೀತ, ಮಂಜುನಾಥ ಕೂದುವಳ್ಳಿ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರಿ ವ್ಯವಸ್ಥೆಯಲ್ಲಿ ಯಾವುದೇ ವಿಚಾರಗಳನ್ನು ಕುರಿತು ಆಗ್ರಹಿಸುವಾಗ ಬೇಡಿಕೆ ಸಲ್ಲಿಸಿ, ಮನವಿ ಮಾಡಿ, ಹರತಾಳಗಳ ಮೂಲಕ ಆಗ್ರಹಿಸಿದರೂ ನ್ಯಾಯ ದೊರಕದಿದ್ದಾಗ ಅನಿವಾರ್ಯವಾಗಿ ಕ್ರಮ ಜರುಗಿಸುವ ಕ್ರಿಯೆಯೇ ಡೈರೆಕ್ಟ್ ಆ್ಯಕ್ಷನ್‌ನ ವಸ್ತು ಎಂದರು.
ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಉದ್ಯಮಿಗಳನ್ನು ಓಲೈಸುವ ಸರ್ಕಾರಗಳ ಕೊರಳಪಟ್ಟಿ ಹಿಡಿದು ಮಾತನಾಡಿಸಿದ್ದು ಇದೇ ನಂಜುಂಡಸ್ವಾಮಿ. ರೈತನ ಬದುಕನ್ನು ಹಸನಗೊಳಿಸಲು ನಂಜುಂಡಸ್ವಾಮಿ ಅಹರ್ನಿಶಿ ಪ್ರಯತ್ನಿಸಿದರು. ಅವರ ಹೋರಾಟದ ಬದುಕನ್ನು ಡೈರೆಕ್ಟ್ ಆ್ಯಕ್ಷನ್ ನಾಟಕದಲ್ಲಿ ಅನಾವರಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ನಂಜುಂಡಸ್ವಾಮಿ ಅವರ ಪ್ರೊಫೆಸೆರ್ ಪಾತ್ರದಲ್ಲಿ ಡಾ. ಎಚ್.ಎಸ್.ನಾಗಭೂಷಣ್ ಕಾಣಿಸಿಕೊಳ್ಳಲಿದ್ದಾರೆ. ಡಿ.ಎಸ್.ರವಿಶಂಕರ್ ಅವರು ಪ್ರಸಾಧನ, ಕೆ.ನಿತೀಶ್, ಬಿ.ವಿ.ತಿಪ್ಪಣ್ಣ, ಪ್ರಭು ಅವರು ಗಾಯನ, ವಿಶ್ವನಾಥ್, ನಿಖಿಲ್, ಪವನ್, ಲೋಕೇಶ್ ಅವರು ರಂಗಸಜ್ಜಿಕೆ, ಕೆ.ಜಯ ಅವರು ವಸ್ತ್ರವಿನ್ಯಾಸ ಮಾಡಲಿದ್ದು ಬಿ.ಆರ್.ಚಂದ್ರಯ್ಯ, ಎಸ್.ಪಿ.ಶ್ರೀಕಂಠ ಪ್ರಸಾದ್ ನಿರ್ವಹಣೆ ಮಾಡಲಿದ್ದಾರೆ ಎಂದರು. ಸಾಹಿತಿ ಬಿ.ಚಂದ್ರೇಗೌಡ, ಮುಖಂಡರಾದ ಜಗದೀಶ್ ನಾಯ್ಕ, ಡಾ. ಕೆ.ಜಿ.ವೆಂಕಟೇಶ್, ಸುರೇಶ್, ಚಂದ್ರಯ್ಯ ಸುದ್ದಿಗೋಷ್ಠಿಯಲ್ಲಿದ್ದರು.