ಪ್ರೌಢಶಾಲೆಗಳಿಗೆ 6 ಸಾವಿರ ಅತಿಥಿ ಶಿಕ್ಷಕರ ಶೀಘ್ರ ನೇಮಕಾತಿಗೆ ಸೂಚನೆ

Vidhanasoudha
Published on

ಬೆಂಗಳೂರು: 2023-24ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 6 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ/ಬಡ್ತಿ/ವರ್ಗಾವಣೆ ಮೂಲಕ ಭರ್ತಿ ಮಾಡುವವರಿಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ 6 ಸಾವಿರ ಅತಿಥಿ ಶಿಕ್ಷಕರನ್ನು ಶಾಲಾ ಆರಂಭದ ದಿನದಿಂದಲೇ ನೇಮಕ ಮಾಡಿಕೊಳ್ಳುವಂತೆ ಸೂಚಿಸಿದೆ.

ಸಂಬಂಧಪಟ್ಟ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಮೂಲಕವೇ ನೇಮಕ ಮಾಡಿಕೊಳ್ಳುವುದು. ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಮೊದಲ ಆದ್ಯತೆಯಾಗಿ ನೇಮಕ ಮಾಡಿಕೊಳ್ಳಬೇಕು.

ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದ್ಯತೆಯಾಗಿ ಮತ್ತು ಇತರೆ ವಿಷಯಗಳಿಗೆ ನಂತರದ ಆದ್ಯತೆ ನೀಡುವಂತೆ ತಿಳಿಸಿದೆ. ಅತಿ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಮೊದಲ ಆದ್ಯತೆಯಾಗಿ ಮೆರಿಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಪ್ರಾಥಮಿಕ ಶಾಲೆಗಳಿಗೆ ಈಗಾಗಲೇ 27 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net