ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ: ದಿನೇಶ್​ ಗುಂಡೂರಾವ್​

Untitled design - 2023-08-02T173130.534
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸರಣಿ ಟ್ವೀಟ್​ ಮಾಡುವ ಮುಖೇನ ಆರೋಪಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್​, ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, "ಮೋದಿಯವರು ಮೌನವಾಗುವ ಸಂದರ್ಭಗಳಿದು, ಗಲಭೆಗಳಾದಾಗ, ಸಾಮೂಹಿಕ ನರಮೇಧಗಳಾಗುವಾಗ, ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ, ಬೆಲೆ ಏರಿಕೆಯಾದಾಗ, ಪಿಎಂ ಕೇರ್ಸ್ ಫಂಡ್ ಬಗ್ಗೆ ಕೇಳಿದಾಗ, 2 ಕೋಟಿ ಉದ್ಯೋಗದ ಬಗ್ಗೆ ಪ್ರಶ್ನಿಸಿದಾಗ, ಕಪ್ಪುಹಣದ ಬಗ್ಗೆ ಕೇಳಿದಾಗ ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ, ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ" ಎಂದು ಹೇಳಿದ್ದಾರೆ.

"ಮೋದಿಯವರು ಮಾತನಾಡುವ ಸಂದರ್ಭಗಳಿದು, ಚುನಾವಣೆ ಬಂದಾಗ, ಪ್ರಚಾರಕ್ಕೆ ಕರೆದಾಗ, ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ,

ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ, ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ‌ ಪಕ್ಷದ ನಾಯಕರು ಎದುರಿರುವ ಸಂದರ್ಭಗಳಲ್ಲಿ ಮಾತ್ರ ‌ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ" ಎಂದು ಹೇಳಿದ್ದಾರೆ.

"ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದ್ರೆ, ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ. ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ?" ಎಂದು ಸರಣಿ ಟ್ವೀಟ್​ ಮುಖೇನ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net