ವಿಧಾನಸಭೆಯ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ; ಬಿಜೆಪಿ ಸದಸ್ಯರು ಅಕ್ಷರಶಃ ಗೂಂಡಾಗಳಂತೆ ವರ್ತಿಸಿದ್ದಾರೆ: ಸಚಿವ ದಿನೇಶ್ ಗುಂಡೂರಾವ್​

Untitled design - 2023-07-20T115017.069
Published on

ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ವರ್ತನೆ ಬಗ್ಗೆ ಕಿಡಿ‌ಕಾರಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ಸದಸ್ಯರು ಅಕ್ಷರಶಃ ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.

"ವಿಧಾನಸಭೆಯಲ್ಲಿ ಯಾವುದು ಆಗಬಾರದಿತ್ತು ಅದು ಸಂಭವಿಸಿದೆ. ಉಪಸಭಾಧ್ಯಕ್ಷರ ಮೇಲೆ ಮಸೂದೆಯ ಪ್ರತಿಯನ್ನು ಹರಿದು ಎಸೆಯುವುದರ ಮೂಲಕ ಬಿಜೆಪಿ ಸದಸ್ಯರು ಅಕ್ಷರಶಃ ಗೂಂಡಾಗಳಂತೆ ವರ್ತಿಸಿದ್ದಾರೆ. ಅವರು ಸದನದ‌ ಮುಖ್ಯಸ್ಥರ ಮೇಲೆಯೇ ಈ ರೀತಿ ರೌಡಿಸಂ ತೋರಿಸಿರುವುದು ಅಕ್ಷಮ್ಯ. ವಿಧಾನಸಭೆಯ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ, ಶ್ರೇಷ್ಠ ಪರಂಪರೆ ಹೊಂದಿರುವ ಕರ್ನಾಟಕ ವಿಧಾನಸಭೆ ತನ್ನ ಘನತೆಯಿಂದ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದ್ರೆ, ಬಿಜೆಪಿಯ ಗೂಂಡಾಪಡೆ ತನ್ನ ರೌಡಿಸಂನಿಂದ ಸದನದ ಪಾವಿತ್ರ್ಯ ಹಾಳು ಮಾಡಿ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ" ಎಂದು ಹೇಳಿದರು.

"ಬಿಜೆಪಿ ಅವರು ತಮ್ಮದು ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ. ಇದೇನಾ ಆ ಶಿಸ್ತು, ಇದೇನಾ ಆ ಪಕ್ಷದ ಸಂಸ್ಕೃತಿ? ಚುನಾವಣೆ ಮುಗಿದು ಎರಡು ತಿಂಗಳಾದರೂ ಬಿಜೆಪಿಯವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಸದನದಲ್ಲಿ ಯಾರು ರೌಡಿಗಳಂತೆ ವರ್ತಿಸುತ್ತಾರೆ, ಅಂತಹವರಿಗೆ ವಿಪಕ್ಷ ನಾಯಕನ ಪಟ್ಟ ಕಟ್ಟಲು ಬಿಜೆಪಿ ವರಿಷ್ಟರು ನಿರ್ಧರಿಸಿದಂತಿದೆ. ಹಾಗಾಗಿ ಅವರ ಪಕ್ಷದ ಸದಸ್ಯರು ಸದನದಲ್ಲಿ ಜಿದ್ದಿಗೆ ಬಿದ್ದಿರುವ ರೌಡಿಗಳಂತೆ ಆಡುತ್ತಿದ್ದಾರೆ" ಎಂದು ಹೇಳುವ ಮುಖೇನ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net