ಕಾಲೇಜಲ್ಲೇ ಡಿಜಿಟಲ್ ಕ್ರಾಂತಿ: ವಿದ್ಯಾರ್ಥಿಗಳಿಗೆ 5 ಸಾವಿರ ರೀತಿಯ ಕೌಶಲ ತರಬೇತಿಗೆ ಸಿದ್ಧತೆ

Digital
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಡಿಜಿಟಲ್ ಕೌಶಲ ಕಲಿಸುವ ಮೂಲಕ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ಯಮಗಳ ಅನುಕೂಲಕ್ಕೆ ತಕ್ಕಂತೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸರ್ಕಾರ ಚಿಮ್ಮುಹಲಗೆಯ ರೀತಿ ಕಾರ್ಯಕ್ಕೆ ಮುಂದಾಗಿದೆ. ಉದ್ಯಮಿಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಕಾಲೇಜು ಮಟ್ಟದಿಂದಲೇ ಅಭಿವೃದ್ಧಿಪಡಿಸಲು ಇನ್ಪೋಸಿಸ್​ನ ಸ್ಪ್ರಿಂಗ್ ಬೋರ್ಡ್ ಜತೆ ಸರ್ಕಾರ ಮುಂದಿನ ವಾರದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿ ಬರುವ ವಿದ್ಯಾರ್ಥಿಗಳು ಇಂದಿನ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಡಿಜಿಟಲ್ ಸಾಕ್ಷರತೆ ಪಡೆದಿರುವುದಿಲ್ಲ. ಉದ್ಯಮಗಳು ಮತ್ತೆ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಬೇಕಾಗುತ್ತದೆ. ಅಲ್ಲದೆ ಕಾಲೇಜು ಪೂರೈಸಿಕೊಂಡು ಬರುವ ವಿದ್ಯಾರ್ಥಿಗಳು ಖಾಸಗಿಯಾಗಿ ಸಾವಿರಾರು ರೂ.ಗಳನ್ನು ವ್ಯಯಿಸಿ ತರಬೇತಿ ಪಡೆಯಬೇಕಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಅದು ಹೊರೆಯಾಗುತ್ತದೆ. ಅದನ್ನು ತಪ್ಪಿಸಿ, ಕಾಲೇಜಿನಿಂದ ಹೊರಬರುವ ವೇಳೆಗೆ ಸಿದ್ಧವಾಗಿರುವ ರೀತಿಯಲ್ಲಿ ರೂಪಿಸುವುದು ಈ ಕಾರ್ಯಕ್ರಮದ ಒಟ್ಟಾರೆ ಉದ್ದೇಶವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳುತ್ತವೆ. ದೇಶದ ನಿರ್ವಣದಲ್ಲಿ ಯುವ ಸಮುದಾಯಕ್ಕೆ ಡಿಜಿಟಲ್ ಸಾಕ್ಷರತೆ ಮೂಲಕವೇ ಶಿಕ್ಷಣ ನೀಡಬೇಕು. ಸಾಂಪ್ರದಾಯಿಕ ಶಿಕ್ಷಣಕ್ಕೆ ಕೌಶಲದ ಅಡಿಪಾಯ ಹಾಕಬೇಕಾಗುತ್ತದೆ ಎಂಬುದು ತಜ್ಞರ ಅಂಬೋಣ.

ಒಡಂಬಡಿಕೆ: ಇನ್ಪೋಸಿಸ್​ನ ಸ್ಪ್ರಿಂಗ್ ಬೋರ್ಡ್ ಜತೆ ಸರ್ಕಾರ ಈಗ ನಿಗದಿಯಾಗಿರುವಂತೆ ಅ.27ಕ್ಕೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಈ ಸಂಸ್ಥೆ ಉಚಿತವಾಗಿ ತರಬೇತಿ ನೀಡಲಿದೆ. ಸಂಸ್ಥೆಯ ಲಿಂಕ್​ನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಅದನ್ನು ಬಳಸಿಕೊಂಡು ತರಬೇತಿ ಪಡೆಯಬಹುದಾಗಿದೆ.

5 ಸಾವಿರ ತರಬೇತಿ

ಇನ್ಪೋಸಿಸ್​ನ ಸ್ಪ್ರಿಂಗ್ ಬೋರ್ಡ್ 5 ಸಾವಿರಕ್ಕೂ ಅಧಿಕ ತರಬೇತಿಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಅಗತ್ಯವಾದ ಯಾವುದೇ ತರಬೇತಿ ಪಡೆಯಬಹುದಾಗಿದೆ. ಇದು ಸಂಪೂರ್ಣ ಆನ್​ಲೈನ್ ತರಬೇತಿಯಾಗಿದೆ. ಆನ್​ಲೈನ್​ನಲ್ಲಿ ಪರೀಕ್ಷೆ ನಡೆಯಲಿದ್ದು, ಆನ್​ಲೈನ್​ನಲ್ಲಿಯೇ ಪ್ರಮಾಣಪತ್ರ ಸಹ ಸಿಗಲಿದೆ. 22 ವರ್ಷದೊಳಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು. ಹೆಚ್ಚಿನ ಸಮಯ ಇದಕ್ಕೆ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಈ ತರಬೇತಿ ಇರುತ್ತದೆ. ಸಮೀಕ್ಷೆ, ಮೈಂಡ್ ಮ್ಯಾಪಿಂಗ್, ವಿಡಿಯೋ ಪ್ರಾಡಕ್ಟ್, ಅಸೆಸ್ಮೆಂಟ್ ಪ್ಲಾ್ಯಟ್​ಫಾಮರ್್​ಗಳನ್ನು ಅದಕ್ಕೆ ಪೂರಕವಾಗಿಯೇ ಸಿದ್ಧಪಡಿಸಲಾಗಿದೆ.

ಯಾವ್ಯಾವ ತರಬೇತಿ

ಇಂಗ್ಲಿಷ್ ಭಾಷೆ, ಕೋಡಿಂಗ್, ಸೈಬರ್ ಸೆಕ್ಯೂರಿಟಿ, ಜಾವ, ಜಾವ ಸ್ಕ್ರಿಪ್ಟ್, ತೈಥಾನ್, ಕ್ಲೌಡ್ ಕಂಪ್ಯೂಟಿಂಗ್, ಬ್ಲಾ್ಯಕ್ ಚೈನ್ ತಂತ್ರಜ್ಞಾನ, ಲೇಥ್ ಮಿಷನ್, ಆರ್ಟಿಫಿಷಿಯಲ್ ಇಂಜಿನಿಯರಿಂಗ್, ಅಕೌಂಟಿಂಗ್, ಹಣಕಾಸು ನಿರ್ವಹಣೆ ಹೀಗೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುಮಾರು 5 ಸಾವಿರ ತರಬೇತಿಗಳನ್ನು ಇನ್ಪೋಸಿಸ್​ನ ಸ್ಪ್ರಿಂಗ್ ಬೋರ್ಡ್ ಸಿದ್ಧಪಡಿಸಿದೆ.

ಶಿಕ್ಷಕರಿಗೂ ತರಬೇತಿ

ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಶಿಕ್ಷಕರಿಗೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತಜ್ಞರಿಂದ ತರಬೇತಿ ಕೊಡಿಸಲಾಗುತ್ತದೆ. ಶಿಕ್ಷಕರಿಗೆ ತರಬೇತಿ ಕೊಟ್ಟಲ್ಲಿ ಅವರು ವಿದ್ಯಾರ್ಥಿಗಳನ್ನು ಇಂತಹ ತರಬೇತಿಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂಬುದು ಇದರ ಉದ್ದೇಶ.

ಸ್ವಯಂಸೇವಕರು ಭಾಗಿ ಸಂಸ್ಥೆ ಸಿದ್ಧಪಡಿಸಿರುವ ತರಬೇತಿ ನೀಡುವುದು ಮಾತ್ರವಲ್ಲ, ಸ್ವಯಂಸೇವಕರು ತಮ್ಮ ಸೇವೆಯನ್ನು ಸಲ್ಲಿಸಲು ಇದರಲ್ಲಿ ಅವಕಾಶ ಇದೆ. ಇಲ್ಲಿ ಪ್ರಾದೇಶಿಕ ಭಾಷೆಗೆ ಅನುಗುಣವಾಗಿ ತರಬೇತಿ ನೀಡುವುದು ವಿಶೇಷ.

ವಿದ್ಯಾರ್ಥಿಗಳನ್ನು ಕಲಿಕೆಯ ಹಂತದಲ್ಲಿಯೇ ಡಿಜಿಟಲ್ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಿದ್ಧಪಡಿಸಿದಾಗ ಮಾತ್ರ ಉದ್ಯಮಗಳ ಅವಶ್ಯಕತೆ ಪೂರೈಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸರ್ಕಾರ ಇನ್ಪೋಸಿಸ್ ಜತೆ ಇಂತಹ ಒಪ್ಪಂದ ಮಾಡಿಕೊಳ್ಳುತ್ತಿದೆ. -ಪಿ. ಪ್ರದೀಪ್ ಇನ್ಪೋಸಿಸ್ ರಾಜ್ಯದ ವಿದ್ಯಾರ್ಥಿಗಳಿಗೆ ಕೌಶಲ ಹೆಚ್ಚಿಸಿಕೊಳ್ಳಲು ಉಚಿತವಾಗಿ ತನ್ನ ಆನ್​ಲೈನ್ ಪ್ಲಾ್ಯಟ್​ಫಾಮ್ರ್ ಒದಗಿಸುತ್ತಿರುವುದು ಸಂತಸದ ವಿಷಯ. ಇದರಿಂದ ಸುಮಾರು 20 ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ಈ ಸಂಬಂಧ ಇದೇ 27ಕ್ಕೆ ಇನ್ಪೋಸಿಸ್ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು. | ಡಾ.ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ

ಎಷ್ಟು ಜನರಿಗೆ ಅನುಕೂಲ?

ಸರ್ಕಾರಿ ಕಾಲೇಜುಗಳಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಈಗಾಗಲೇ ಟ್ಯಾಬ್ ಹಾಗೂ ಲ್ಯಾಪ್​ಟಾಪ್​ಗಳನ್ನು ಸರ್ಕಾರ ನೀಡಿದೆ. ಅವುಗಳ ಮೂಲಕ ಈ ಡಿಜಿಟಲ್ ಕೌಶಲದ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ.

ಮುಖ್ಯಾಂಶಗಳು

· 20 ಲಕ್ಷ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ

· ಬಿಎ, ಬಿಕಾಂ, ಬಿಎಸ್​ಸಿ, ಬಿಇ ಸೇರಿ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಅನ್ವಯ

ಅನುಕೂಲಗಳೇನು?

· ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

· ಉದ್ಯಮಗಳಿಗೆ ತಕ್ಕಂತೆ ಸಿದ್ಧತೆ

· ಖಾಸಗಿಯಾಗಿ ಹಣ ತೆತ್ತು ಕಲಿಯುವುದು ತಪು್ಪತ್ತದೆ

· ಶಿಕ್ಷಣ ಮುಗಿಯುವುದರೊಳಗೆ ವಿದ್ಯಾರ್ಥಿಗಳು ಸಜ್ಜು

· ರಾಷ್ಟ್ರೀಯ ಶಿಕ್ಷಣ ಜಾರಿಗೂ ಪೂರಕ

· ಶಿಕ್ಷಕರಿಗೂ ತರಬೇತಿ

· ಸಾಂಪ್ರದಾಯಿಕ ಶಿಕ್ಷಣಕ್ಕೆ ಡಿಜಿಟಲ್ ಅಡಿಪಾಯ

· ಪ್ರಾದೇಶಿಕ ಭಾಷೆಯಲ್ಲಿಯೂ ಕಲಿಕೆಗೆ ಅವಕಾಶ

· ಆನ್​ಲೈನ್ ಆಗಿರುವುದರಿಂದ ಬೇಕಾದಾಗ ಲಾಗಿನ್ ಆಗಬಹುದು

ಯಾವ ಕೌಶಲ?

· (ಆರು ಮಾದರಿ ಗುರುತು)

· ಮೂಲಕೌಶಲ

· ಡಿಜಿಟಲ್ ಕೌಶಲ

· ಆಜೀವ ಕೌಶಲ

· ನಿರಂತರ ಕೌಶಲ

· ನಡವಳಿಕೆ ಕೌಶಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net