ರಾಜಕೀಯಕ್ಕೂ ಡಿಜಿ ಆದ್ಯತೆ

FB
Published on

ಬೆಂಗಳೂರು: ರಾಜಕೀಯ ಸಭೆ-ಸಂವಾದ, ಚರ್ಚೆಗೆ ಡಿಜಿಟಲ್ ವೇದಿಕೆ ಎಷ್ಟು ಪರಿಣಾಮಕಾರಿಯೋ ತಿಳಿದಿಲ್ಲ. ಆದರೆ, ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ನಾಯಕರು ಡಿಜಿಟಲ್ ಪಾಲಿಟಿಕ್ಸ್​ಗೆ ಆದ್ಯತೆ ನೀಡುತ್ತಿದ್ದಾರೆ.

ಲಾಕ್​ಡೌನ್​ನಿಂದ ರಾಜಕೀಯ ಚಟುವಟಿಕೆಗೆ ಬ್ರೇಕ್ ಬಿದ್ದಿದ್ದು, ಸದ್ಯಕ್ಕೆ ರ್ಯಾಲಿ, ಸಮಾವೇಶ, ದೊಡ್ಡ ಮಟ್ಟದ ಸಭೆ ನಡೆಸುವಂತಿಲ್ಲ. ಒಂದು ವೇಳೆ ನಡೆಸಿದರೂ ಕಾರ್ಯಕರ್ತರು, ಜನರು ಸೇರುತ್ತಾರೆಂಬ ನಂಬಿಕೆ ನಾಯಕರಿಗಿಲ್ಲ. ಈ ಕಾರಣಕ್ಕೆ ಡಿಜಿಟಲ್ ವೇದಿಕೆ ಬಳಸಿಕೊಂಡು ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಅನುಯಾಯಿಗಳ ಸಂಖ್ಯೆ ಹೆಚ್ಚಿಸಿ ಕೊಳ್ಳುವುದು, ತಾವು ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವುದು, ಸಂದೇಶ-ಅಭಿಪ್ರಾಯಗಳನ್ನು ಮತದಾರರಿಗೆ ಕಾಲಕಾಲಕ್ಕೆ ಮುಟ್ಟಿಸುವುದು ಇದರ ಉದ್ದೇಶ. ಲಾಕ್​ಡೌನ್ ಜಾರಿ ಬಳಿಕ ಮೂರೂ ಪಕ್ಷಗಳು ವಿಡಿಯೋ ಸಂವಾದ ಅಥವಾ ಡಿಜಿಟಲ್ ಮಾಧ್ಯಮ ಬಳಕೆ ಹೆಚ್ಚಿಸಿವೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪಕ್ಷದ ಶಾಸಕರು, ಮುಖಂಡ ರೊಂದಿಗೆ ವಿಡಿಯೋ ಸಂವಾದ ನಡೆಸಿ ಕರೊನಾ ನಿರ್ವಹಣೆ ಬಗ್ಗೆ ವಿಚಾರಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ವಿಡಿಯೋ ಸಂವಾದ ಹೆಚ್ಚೆಚ್ಚು ನಡೆಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ವಿಡಿಯೋ ಸಂವಾದದ ಮೂಲಕ ಸಮಾಜದ ಗಣ್ಯರು, ಮಠಾಧೀಶರು, ಬುದ್ಧಿಜೀವಿಗಳ ಜತೆಗೆ ಮಾತನಾಡಿದ್ದರು, ಅದೇ ಮಾದರಿಯಲ್ಲಿ ರಾಜ್ಯಾಧ್ಯಕ್ಷರೂ ಡಿಜಿಟಲ್ ಸಭೆ ನಡೆಸಿದ್ದಾರೆ.

ಪ್ರಯೋಜನಗಳು..

1. ಜಿಲ್ಲೆ-ತಾಲೂಕುಗಳಿಗೆ ಉಸ್ತುವಾರಿಗಳನ್ನು ಕಳಿಸಿ ಸಭೆ ಆಯೋಜಿಸಿ ಮಾಹಿತಿ ರವಾನಿಸುವ ಕೆಲಸ ಇನ್ನು ಇರದು. ಒಮ್ಮೆಲೇ ಪಕ್ಷದ ಸಂದೇಶ ಕೊನೆಯ ಘಟಕದವರೆಗೂ ಮುಟ್ಟಿಸಬಹುದು.

2. ಪಕ್ಷದ ಅಧ್ಯಕ್ಷರು, ಪ್ರಮುಖ ನಾಯಕರು ಬೂತ್​ವುಟ್ಟದವರೆಗೂ ಸಂಪರ್ಕ ಹೊಂದಬಹುದು, ಸಂವಾದ ನಡೆಸಬಹುದು, ನೇರ ಸಂದೇಶ ಕಳುಹಿಸಬಹುದು.

3. ಈ ಮಾಧ್ಯಮ ಪರಿಣಾಮಕಾರಿ ಎನಿಸಿದ್ದು, ಹಳ್ಳಿಯ ಮೂಲೆಯಲ್ಲಿರುವ ಕಾರ್ಯಕರ್ತ ರಿಗೂ ನಾಯಕರು ನೇರವಾಗಿ ಸಂಪರ್ಕದಲ್ಲಿದ್ದಾರೆ ಎಂಬ ಭಾವನೆ ಬಂದಿದೆ.

4. ಪಕ್ಷ ನೀಡಿದ ಕಾರ್ಯಭಾರ ಯಾವ ರೀತಿ ನಡೆಯುತ್ತಿದೆ ಎಂದು ಜವಾಬ್ದಾರಿ ಹೊತ್ತವರು ನೇರವಾಗಿ ಗಮನಿಸಲು ಸಾಧ್ಯವಾಗುತ್ತಿದೆ.

ಡಿಜಿಟಲ್ ಮಾಧ್ಯಮ ಹಲವು ವರ್ಷಗಳಿಂದ ಇದ್ದರೂ ರಾಜಕೀಯದಲ್ಲಿ ಹೆಚ್ಚು ಬಳಸುತ್ತಿರಲಿಲ್ಲ, ಈಗ ಅನಿವಾರ್ಯ. ನಮ್ಮ ಪಕ್ಷ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. | ನಟರಾಜ್ ಗೌಡ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಲಾಕ್​ಡೌನ್ ಅವಧಿಯಲ್ಲಿ ಡಿಜಿಟಲ್ ಮಾಧ್ಯಮ ದಿಂದ ಬೂತ್​ವರೆಗೂ ತಲುಪಲು ಸಾಧ್ಯವಾಗಿದೆ. ಶಾಸಕರು, ಪದಾಧಿಕಾರಿಗಳು, ಜಿಲ್ಲಾ ಘಟಕ, ಬೂತ್​ಗಳ ಜತೆ ಅಧ್ಯಕ್ಷರು ಸಂಪರ್ಕದಲ್ಲಿರಲು ಸಾಧ್ಯವಾಗಿದೆ. | ಎ.ಎಚ್.ಆನಂದ್ ಬಿಜೆಪಿ ರಾಜ್ಯ ವಕ್ತಾರ

| ಶ್ರೀಕಾಂತ್ ಶೇಷಾದ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net