

ಬೆಂಗಳೂರು: ಭೂಸ್ವಾಧೀನ ಪ್ರಕ್ರಿಯೆಯನ್ನು ಪಾರದರ್ಶಕ, ದಕ್ಷತೆ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಕಂದಾಯ ಇಲಾಖೆ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ (ಯುಎಲ್‌ಎಂಎಸ್) ತಂತ್ರಾಂಶ ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲಿ ಯಾವುದೇ ಭೂಸ್ವಾಧೀನ ನಡೆದರೂ ಆನ್‌ಲೈನ್‌ನಲ್ಲೇ ಕಡತ ವಿಲೇವಾರಿ ಮತ್ತು ಭೂ ಪರಿಹಾರ ಮಂಜೂರಾತಿ ನಡೆಯಲಿದೆ.
ವಿಕಾಸಸೌಧದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಇ-ಆಡಳಿತ ವಿಭಾಗದ ಸೆಂಟರ್ ಾರ್ ಸ್ಮಾರ್ಟ್ ಗವರ್ನನ್ಸ್ ಯುಎಲ್‌ಎಂಎಸ್ ತಂತ್ರಾಂಶ ಅಭಿವೃದ್ಧಿಪಡಿಸಿದೆ ಎಂದು ಮಾಹಿತಿ ನೀಡಿದರು.
ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಮೂಲಸೌಲಭ್ಯ ಅಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಗೃಹ ಮಂಡಳಿ, ಕೆಶಿಪ್, ಕೆ-ರೈಡ್, ಮೆಟ್ರೋ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂತಾದ ಇಲಾಖೆಗಳು ಭೂಸ್ವಾಧೀನ ನಡೆಸಲಿವೆ. ಇಲಾಖೆಗಳ ಕೊಂಡಿಯಾಗಿ ಸಂಪೂರ್ಣ ವಿವರಗಳನ್ನು ನಮೂದಿಸಲು ಅನುವು ಮಾಡಿಕೊಡುತ್ತದೆ. ಭೂಸ್ವಾಧೀನ ಪ್ರಸ್ತಾವನೆಗಳು, ಅದರ ಸ್ಥಿತಿಗತಿಗಳ ನೈಜ ಸಮಯದ ಮಾಹಿತಿಯನ್ನು ಪಾಲುದಾರರು ಮತ್ತು ತೀರ್ಮಾನ ಕೈಗೊಳ್ಳುವ ಸಂಸ್ಥೆಗಳಿಗೆ ಕ್ರೋಢಿಕೃತ ಡ್ಯಾಶ್‌ಬೋರ್ಡ್‌ನ ಮೂಲಕ ತಲುಪಿಸಲು ಯುಎಲ್‌ಎಂಎಸ್ ಅನುವು ಮಾಡಿಕೊಡುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಇರುವ ಎಸ್‌ಎಲ್‌ಒಗಳು ಯುಎಲ್‌ಎಂಎಸ್‌ನಲ್ಲಿ ಲಾಗಿನ್ ಐಡಿ ಸೃಜನೆ ಮಾಡಿಕೊಂಡು ಸಂಬಂಧಪಟ್ಟ ಯೋಜನೆಯ ಭೂಸ್ವಾಧೀನದ ಕಡತಗಳನ್ನು ವಿಲೇವಾರಿ ಮಾಡಬೇಕು. ಮಾಲೀಕರು ಯಾರು, ವಿಸ್ತೀರ್ಣ ಎಷ್ಟಿದೆ, ಸ್ವಾಧೀನಪಡಿಸಿಕೊಂಡ ವಿಸ್ತೀರ್ಣ, ಅಸಲಿ ಮಾಲೀಕ ಯಾರು, ಸರ್ಕಾರಿ ಭೂಮಿ ವಿವರ, ಭೂ ವ್ಯಾಜ್ಯ, ನೋಟಿಫಿಕೇಷನ್ ಮಾಡುವ ಸಮಯದಲ್ಲಿ ಜಮೀನಿನ ಸ್ಥಿತಿಗತಿಯ ಸ್ಯಾಟಲೈಟ್ ೆಟೋ, ಭೂಮಿಯ ಮಾರುಕಟ್ಟೆ ಬೆಲೆ, ಮಾರ್ಗಸೂಚಿ ದರ, ವಾರಸುದಾರರಿಗೆ ಎಷ್ಟು ಪರಿಹಾರ ನೀಡಬೇಕೆಂಬುದರ ಬಗ್ಗೆ ಭೌತಿಕ ಕಡತಗಳ ಬದಲು ಯುಎಲ್‌ಎಂಎಸ್ ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಲಿದ್ದಾರೆ. ಒಮ್ಮೆ ಅಪ್‌ಲೋಡ್ ಮಾಡಿದ ಮೇಲೆ ತಿದ್ದುಪಡಿಗೆ ತಿರುಚಲು, ನಕಲಿ ಕಡತ ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂದು ಕೃಷ್ಣಬೈರೇಗೌಡ ವಿವರಿಸಿದರು.
ಒಂದೇ ವೇದಿಕೆಯಲ್ಲಿ ಕಡತ ವಿಲೇವಾರಿ
ಯುಎಲ್‌ಎಂಎಸ್ ತಂತ್ರಾಂಶದೊಂದಿಗೆ ಭೂಮಿ ತಂತ್ರಾಂಶ, ಸಬ್‌ರಿಜಿಸ್ಟ್ರಾರ್ ಕಚೇರಿಯ ಕಾವೇರಿ 2.0, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಇ-ಸ್ವತ್ತು, ನಗರಾಭಿವೃದ್ಧಿ ಇಲಾಖೆಯ ಇ-ಆಸ್ತಿ, ಕೆಜಿಐಎಸ್‌ನಂತಹ ಎಲ್ಲ ತಂತ್ರಾಂಶಗಳನ್ನು ಸಂಯೋಜನೆ ಮಾಡಲಾಗಿದೆ. ಭೂಸ್ವಾಧೀನದ ವೇಳೆ ಭೌತಿಕ ಕಡತಗಳನ್ನು ಪಡೆಯದೆ ನೇರವಾಗಿ ಸಂಬಂಧಪಟ್ಟ ಇಲಾಖೆಯ ತಂತ್ರಾಂಶದಿಂದ ದಾಖಲೆ ಸ್ವೀಕರಿಸಿ ಜಮೀನು ಪರಿಹಾರ, ಪುನರ್ ವಸತಿ ನಿರ್ಮಾಣ ಸೇರಿ ಎಲ್ಲ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತದೆ. ಆರ್ಥಿಕ ಇಲಾಖೆಯ ಖಜಾನೆ-2 ತಂತ್ರಾಂಶವನ್ನು ಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕೋರ್ಟ್ ವ್ಯಾಜ್ಯ
ಭೂಸ್ವಾಧೀನ ನಡೆಸುವಾಗ ಹೆಚ್ಚಿನ ಪರಿಹಾರ ಕೋರಿ ಕೋರ್ಟ್ ಮೊರೆ ಹೋಗುವುದರ ಸಂಬಂಧ ಮಾಹಿತಿಯನ್ನು ಯುಎಲ್‌ಎಂಎಸ್‌ನಲ್ಲಿ ಎಸ್‌ಎಲ್‌ಒಗಳು ಅಪ್‌ಡೇಟ್ ಮಾಡಬೇಕು. ಎಷ್ಟು ದಿನದ ಒಳಗೆ ಮೇಲ್ಮನವಿ ಹೋಗಿದ್ದಾರೆ, ಎಸ್‌ಎಲ್‌ಒಗಳ ಹೆಸರು, ಸರ್ಕಾರಿ ವಕೀಲರ ಹೆಸರು ಎಲ್ಲವೂ ನಮೂದು ಮಾಡಿ ಸದಾ ಕಾಲ ನಿಗಾವಹಿಸಲಾಗುತ್ತದೆ.
ಎಸ್‌ಎಲ್‌ಒಗಳಿಗೆ ಸೂಚನೆ
ಜಿಲ್ಲೆಯ ಭೂಸ್ವಾಧೀನ ಅಧಿಕಾರಿ(ಎಸ್‌ಎಲ್‌ಒ)ಗಳಿಗೆ ಈ ತಂತ್ರಾಂಶದಲ್ಲಿ ಲಾಗಿನ್ ಆಗಿ ಅರ್ಜಿ ವಿಲೇವಾರಿಗೆ ಸೂಚನೆ ನೀಡಿದರು. 15 ದಿನಗಳ ಒಳಗಾಗಿ ಕಾರ್ಯಾಗಾರ ಆಯೋಜನೆ ಮಾಡಲಿದ್ದು, ಅಷ್ಟರಲ್ಲಿ ತಂತ್ರಾಂಶದ ಸಾಧಕ ಮತ್ತು ಬಾಧಕಗಳ ಮಾಹಿತಿಯನ್ನು ಪಟ್ಟಿ ಮಾಡಿಕೊಳ್ಳಬೇಕು. ಕಾರ್ಯಾಗಾರದ ವೇಳೆ ಸಲಹೆ, ಸೂಚನೆ ಕೊಡುವಂತೆ ಎಸ್‌ಎಲ್‌ಒಗಳಿಗೆ ಕಂದಾಯ ಸಚಿವರು ಸೂಚನೆ ನೀಡಿದ್ದಾರೆ.
ಭೂಸ್ವಾಧೀನ ಎಂಬ ದಂಧೆ ಸಂಕ್ಷಿಪ್ತ
-ಪ್ರಭಾವಿಗಳ ಭೂಸ್ವಾಧೀನದ ದಂಧೆಗೆ ನೋಟಿಫಿಕೇಷನ್ ತಡಮಾಡುವುದು
-ಕಡಿಮೆ ಬೆಲೆಗೆ ಖರೀದಿಸಿ ಪ್ರಭಾವ ಬಳಸಿ ಹೆಚ್ಚಿನ ಪರಿಹಾರ ಪಡೆಯುವುದು
-ನೋಟಿಫಿಕೇಷನ್ ಮಾಡಿದ ಮೇಲೂ ಭೂಪರಿವರ್ತನೆ ಮಾಡಿ ಹೆಚ್ಚಿನ ಪರಿಹಾರ ಸ್ವೀಕಾರ
-ಕೃಷಿ ಜಮೀನಿನಲ್ಲಿ ಏಕಾಏಕಿ ಮಾವು, ತೆಂಗು ನೆಟ್ಟು ಹೆಚ್ಚಿನ ಪರಿಹಾರ ಬೇಡಿಕೆ
-ಖಾಲಿ ಜಾಗದಲ್ಲಿ ಸೀಟ್ ಮನೆ ಕಟ್ಟಿ ಆರ್‌ಸಿಸಿ ಬಿಲ್ಡಿಂಗ್ ಎಂದು ಪರಿಹಾರ ವಸೂಲಿ
-ಭೂಪರಿಹಾರದ ವೇಳೆ ಪ್ರಭಾವಕ್ಕೆ ಒಳಗಾಗಿ ಎಸ್‌ಎಲ್‌ಒಗಳು ಹೆಚ್ಚಿನ ಪರಿಹಾರ ನಿಗದಿ
-ನಿಗದಿಗಿಂತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡು ಸರ್ಕಾರಕ್ಕೆ ನಷ್ಟ ಮಾಡುವುದು
-ಅಸಲಿ ವಾರಸುದಾರರಿಗೆ ಪರಿಹಾರ ನೀಡದೆ ನಕಲಿ ಮಾಲೀಕನಿಗೆ ಪರಿಹಾರ ವಿತರಣೆ
-ಕೋರ್ಟ್‌ನಲ್ಲಿ ಭೂ ವ್ಯಾಜ್ಯ ಇದ್ದರೂ ಕಡತ ಬಚ್ಚಿಟ್ಟು ಹಣ ಬಿಡುಗಡೆ
-ಸರ್ಕಾರಿ, ಗೋಮಾಳ ಜಮೀನಿಗೆ ನಕಲಿ ದಾಖಲೆ ಕೊಟ್ಟು ಪರಿಹಾರ ವಿತರಣೆ
ಏಕೀಕೃತ ಭೂಸ್ವಾಧೀನ ವ್ಯವಸ್ಥೆಯೊಂದಿಗೆ ಆಡಳಿತದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಿದೆ. ಭೂ ಮಾಲೀಕರು ಮತ್ತು ಬಾಧಿತ ಕುಟುಂಬಗಳಿಗೆ ಸ್ವಾಧೀನ ಪ್ರಕ್ರಿಯೆ ಪಾರದರ್ಶಕತೆಯಲ್ಲಿ ನಡೆಯಲಿದೆ.
ಕೃಷ್ಣಬೈರೇಗೌಡ-ಕಂದಾಯ ಸಚಿವ