

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಆಸ್ತಿ ನೋಂದಣಿಗೆ ಡಿಜಿಟಲ್ ಖಾತೆ ಕಡ್ಡಾಯ ನಿಯಮದಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ದಸ್ತಾವೇಜು ಪೂರ್ವ ಪರಿಶೀಲನೆ ಒಂದು ಕಚೇರಿಯಲ್ಲಿ ರಿಜಿಸ್ಟ್ರೇಷನ್, ಮತ್ತೊಂದು ಕಚೇರಿಯಲ್ಲಿ ಮಾಡುವ ನಿಯಮ ಜಾರಿಗೆ ತರಲು ಕಂದಾಯ ಇಲಾಖೆ ಹೊರಟಿದೆ. ಆದರೆ, ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮುನ್ನವೇ ಈ ಪದ್ಧತಿ ಜಾರಿಗೊಳಿಸುವುದು ಬೇಡ ಎಂದು ಸಬ್ ರಿಜಿಸ್ಟ್ರಾರ್ಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕಾವೇರಿ 2.0ನಲ್ಲಿ ‘ಎನಿವೇರ್ ನೋಂದಣಿ ಅನ್ವಯ ದಸ್ತಾವೇಜುಗಳ ಪೂರ್ವ ಪರಿಶೀಲನೆಗೆ ಸಬ್ ರಿಜಿಸ್ಟ್ರಾರ್ಗಳಿಗೆ ಸ್ವಯಂ ಹಂಚಿಕೆ ಮತ್ತು ರೌಂಡ್ ರಾಬಿನ್ ರೋಸ್ಟರ್ ಪದ್ಧತಿ’ ಅಪ್ಡೇಟ್ ಮಾಡಲು ಕಂದಾಯ ಇಲಾಖೆ ನಿರ್ಧರಿಸಿದೆ. ಇದರಿಂದ ಸಬ್ ರಿಜಿಸ್ಟ್ರಾರ್ಗಳು ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಹ ಸಂಕಷ್ಟ ಎದುರಾಗಲಿದ್ದು, ಇದರಿಂದ ಜನರಿಗೂ ಅನಾನುಕೂಲ ಎನ್ನಲಾಗುತ್ತಿದೆ.
ಭಾರತೀಯ ನೋಂದಣಿ ಕಾಯ್ದೆ 1908 ಮತ್ತು ಕರ್ನಾಟಕ ನೋಂದಣಿ ನಿಯಮ 1965ರಡಿ ಉಪ ನೋಂದಣಾಧಿಕಾರಿಗಳು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಡೆದು ದಸ್ತಾವೇಜು ನೋಂದಣಿ ಮಾಡುತ್ತಿದ್ದಾರೆ. ಕಾಯ್ದೆಗೆ ಯಾವುದೇ ತಿದ್ದುಪಡಿ ತರದೆ ಕೇವಲ ಸುತ್ತೋಲೆ ಮೇಲೆ ಇತ್ತೀಚೆಗೆ ಜಿಲ್ಲೆ ವ್ಯಾಪ್ತಿಯಲ್ಲಿ ಎನಿವೇರ್ ರಿಜಿಸ್ಟ್ರೇಷನ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇದೀಗ ಸಾಫ್ಟ್ವೇರ್ನಲ್ಲಿಯೇ ದಸ್ತಾವೇಜುಗಳ ಪೂರ್ವ ಪರಿಶೀಲನೆಗೆ ಸಬ್ ರಿಜಿಸ್ಟ್ರಾರ್ಗಳಿಗೆ ಸ್ವಯಂ ಹಂಚಿಕೆ ಮತ್ತು ರೌಂಡ್ ರಾಬಿನ್ ರೋಸ್ಟರ್ ಪದ್ಧತಿಯನ್ನು ತರಲು ಸಿದ್ಧತೆ ನಡೆಯುತ್ತಿದೆ.
ಈ ಪ್ರಕಾರ ಕಾವೇರಿ 2.0ನಲ್ಲಿ ಸಿಟಿಜಲ್ ಲಾಗಿನ್ನಲ್ಲಿ ಪಕ್ಷಕಾರರು ನೋಂದಣಿಗೆ ದಸ್ತಾವೇಜು ಅಪ್ಲೋಡ್ ಮಾಡಿದಾಗ ಪೂರ್ವ ಪರಿಶೀಲನೆಗೆ ಸ್ವಯಂ ಚಾಲಿತವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಾಖಲೆ ಪತ್ರಗಳು ಆನ್ಲೈನ್ನಲ್ಲಿ ಹೋಗಲಿವೆ. ತಮ್ಮ ಲಾಗಿನ್ಗೆ ಬರುವ ದಸ್ತಾವೇಜುಗಳನ್ನು ಸಬ್ ರಿಜಿಸ್ಟ್ರಾರ್ಗಳು, ಆನ್ಲೈನ್ನಲ್ಲಿ ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಬೇಕು. ಇಲ್ಲಿ ಪಕ್ಷಕಾರರು ಮುಖಾಮುಖಿ ಭೇಟಿ ಆಗಿ ಅಸಲಿ ಪ್ರತಿ ನೋಡುವ ಅವಕಾಶ ಇರುವುದಿಲ್ಲ. ಕೇವಲ ಆನ್ಲೈನ್ನಲ್ಲಿ ಪರಿಶೀಲನೆ ಮಾಡಿ ಓಕೆ ಮಾಡಬೇಕಿದೆ. ಇದಾದ ಮೇಲೆ ಪಕ್ಷಕಾರರು ರಾಜಸ್ವ ಪಾವತಿ ಮಾಡಿ ತನಗೆ ಬೇಕಾದ ಸಬ್ರಿಜಿಸ್ಟ್ರಾರ್ ಕಚೇರಿ ಆಯ್ಕೆ ಮಾಡಿಕೊಂಡು ದಿನಾಂಕ ಮತ್ತು ಟೈಮ್ ಸ್ಲಾಟ್ ಬುಕ್ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ಕಚೇರಿಗೆ ಪಕ್ಷಕಾರರು ರಿಜಿಸ್ಟ್ರೇಷನ್ಗೆ ಹಾಜರಾಗಬೇಕು. ಪೂರ್ವ ಪರಿಶೀಲನೆ ಈಗಾಗಲೆ ನಡೆಸಿರುವ ಹಿನ್ನೆಲೆಯಲ್ಲಿ ಪಕ್ಷಕಾರರ ಫೋಟೋ ಮತ್ತು ಬೆರಳಚ್ಚು ಪಡೆದು ರಿಜಿಸ್ಟ್ರೇಷನ್ ಮುಗಿಸಿ ಸಬ್ ರಿಜಿಸ್ಟ್ರಾರ್ಗಳು ಸಹಿ ಮಾಡಿ ಕೊಡುವುದಷ್ಟೇ ಅವಕಾಶ ಆಗಿರುತ್ತದೆ. ದಾಖಲೆ ಪೂರ್ವ ಪರಿಶೀಲನೆ ನಡೆಸಿದ ಅಧಿಕಾರಿಯೇ ರಿಜಿಸ್ಟ್ರೇಷನ್ ಮಾಡಬೇಕು. ಪರಿಶೀಲನೆ ಒಬ್ಬರು ನೋಂದಣಿ ಮತ್ತೊಬ್ಬರು ಮಾಡುವ ಪದ್ಧತಿಯಿಂದ ಕಾನೂನು ತೊಡಕು ಎದುರಾಗಲಿದೆ ಎಂದು ಸಬ್ ರಿಜಿಸ್ಟ್ರಾರ್ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಯ್ದೆಗೆ ತಿದ್ದುಪಡಿ ತನ್ನಿ..!: ನೋಂದಣಿ ಮತ್ತು ಮುದ್ರಾಂಕ ಕಾಯ್ದೆ 1957ರ ಅನ್ವಯ ಮುದ್ರಾಂಕ ಶುಲ್ಕ ವಸೂಲಿ ಜವಾಬ್ದಾರಿ ಸಬ್ರಿಜಿಸ್ಟ್ರಾರ್ಗಳು ನಿರ್ವಹಿಸುತ್ತಿದ್ದಾರೆ. ದಸ್ತಾವೇಜು ಪೂರ್ವ ಪರಿಶೀಲನೆಗೆ ಸಬ್ ರಿಜಿಸ್ಟ್ರಾರ್ಗಳಿಗೆ ಸ್ವಯಂ ಹಂಚಿಕೆ ಮತ್ತು ರೌಂಡ್ ರಾಬಿನ್ ರೋಸ್ಟರ್ ಪದ್ಧತಿಯಿಂದ ನಿತ್ಯದ ಕೆಲಸ ಕ್ಲಿಷ್ಟವಾಗಲಿದೆ. ಉಪ ನೋಂದಣಿ ಕಚೇರಿ ಮೂಲ ವ್ಯಾಪ್ತಿಯ ದಸ್ತಾವೇಜುಗಳನ್ನು ನಿಖರವಾಗಿ ಮತ್ತು ವೇಗವಾಗಿ ಪರಿಶೀಲನೆ ನಡೆಸಬಹುದು. ದಸ್ತಾವೇಜುಗಳ ವಕ್ಕಣೆ ಮೇಲೆ ಮುದ್ರಾಂಕ ಶುಲ್ಕ ನಿಗದಿಪಡಿಸದೆ ಅದರ ಮೂಲ ಉದ್ದೇಶ ಅನುಸಾರವಾಗಿ ವರ್ಗೀಕರಿಸಿ ಮುದ್ರಾಂಕ ಶುಲ್ಕ ನಿಗದಿಪಡಿಸಬೇಕಾಗುತ್ತದೆ. ಬೇರೆ ಕಚೇರಿ ವ್ಯಾಪ್ತಿಯ ದಸ್ತಾವೇಜುಗಳ ಪರಿಶೀಲಿಸಲು ಹೆಚ್ಚಿನ ಸಮಯ ಬೇಕಾಗಿದ್ದು, ಮಾನವ ಸಹಜ ತಪು್ಪಗಳು ಸಹ ಹೆಚ್ಚಾಗುತ್ತದೆ. ಕೆಲವು ದಸ್ತಾವೇಜುಗಳ ವರ್ಗೀಕರಣ ಮತ್ತು ಮುದ್ರಾಂಕ ಶುಲ್ಕ ನಿಗದಿಪಡಿಸುವ ವೇಳೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತದೆ. ಬೇರೊಬ್ಬ ಅಧಿಕಾರಿ ಕೆಲಸವನ್ನು ಮತ್ತೊಬ್ಬ ಅಧಿಕಾರಿ ಒಪ್ಪಿಕೊಳ್ಳುವ ಅನಿವಾರ್ಯತೆ ಬರಲಿದೆ. ಅಂತಹ ವೇಳೆ ನೋಂದಣಿ ನಿಯಮ 1965ರ ನಿಯಮ 170 ಶಿಕ್ಷೆ ಸಹ ಅನುಭವಿಸಬೇಕಾಗುತ್ತದೆ. ನೋಂದಣಿ ಕಾಯ್ದೆ 1908ರಲ್ಲಿ ಯಾವ ಉಪ ನೋಂದಣಾಧಿಕಾರಿ ಮುಂದೆ ನೋಂದಣಿ ದಸ್ತಾವೇಜು ಹಾಜರುಪಡಿಸುತ್ತೆದೆಯೋ ಅದೇ ಅಧಿಕಾರಿ ದಸ್ತಾವೇಜು ಪರಿಶೀಲಿಸಿ, ರಾಜಸ್ವ ವಸೂಲಿ ಮಾಡಿ ಕಾನೂನಾತ್ಮಕವಾಗಿ ನೋಂದಣಿ ಮಾಡುವುದು ನೈಸರ್ಗಿಕ ನ್ಯಾಯ. ಆದರೆ, ತನ್ನ ಮುಂದೆ ಹಾಜರುಪಡಿಸದ ದಸ್ತಾವೇಜುಗಳನ್ನು ನೋಂದಣಿ ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲುವುದು ಎಷ್ಟು ಸರಿ ಎಂಬುದು ಅಧಿಕಾರಿಗಳ ಪ್ರಶ್ನೆಯಾಗಿದೆ.
ಡಿಟಿಡಿ ನೋಂದಣಿಯೂ ಸ್ಥಗಿತ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ನೋಂದಣಿಗೆ ಡಿಜಿಟಲ್ ಖಾತಾ ಕಡ್ಡಾಯ ಮಾಡಿರುವ ಪರಿಣಾಮ ರಾಷ್ಟ್ರೀಕೃತ, ಸಹಕಾರ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ತಾಂತ್ರಿಕ ಸಮಸ್ಯೆ ಎದುರಾಗಿ, ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ.
ಸಾಲಕ್ಕಾಗಿ ಆಧಾರ ಮಾಡುವ ಸ್ಥಿರಾಸ್ತಿ ದಾಖಲೆಗಳ ಡಿಟಿಡಿ (ಡೆಪಾಸಿಟ್ ಆಫ್ ಟೈಟಲ್ ಡೀಡ್) ಉಪ ನೋಂದಣಿ ಕಚೇರಿಯಲ್ಲಿ ಡಿಜಿಟಲ್ ಖಾತಾ ಇಲ್ಲವೆಂದು ನೊಂದಣಿ ಮಾಡುತ್ತಿಲ್ಲ. ಸಾಲ ಸೌಲಭ್ಯ ವಿತರಿಸುವ ಬ್ಯಾಂಕುಗಳಿಗೆ ಮತ್ತು ಸಾಲ ಪಡೆಯುವರಿಗೆ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಈ ಕೂಡಲೇ ಪರಿಹರಿಸಬೇಕೆಂದು ಬೆಂಗಳೂರು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಡಾ. ಎಂ.ಆರ್. ವೆಂಕಟೇಶ್, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಹುತೇಕ ಆಸ್ತಿಗಳಿಗೆ ಪೂರ್ಣ ಇ-ಖಾತಾ ವಿತರಿಸಿಲ್ಲ. ಇದರಿಂದ ಬ್ಯಾಂಕುಗಳಲ್ಲಿ ಮತ್ತು ಸೊಸೈಟಿಗಳಲ್ಲಿ ಮಂಜೂರಾದ ಸಾಲಗಳನ್ನು ಸಕಾಲದಲ್ಲಿ ಬ್ಯಾಂಕಿನ ಗ್ರಾಹಕರು ಸ್ವೀಕರಿಸುತ್ತಿಲ್ಲ. ಬ್ಯಾಂಕುಗಳ, ಕ್ರೆಡಿಟ್ ಸೊಸೈಟಿಗಳ ಅದರಲ್ಲೂ ಪಟ್ಟಣ ಸಹಕಾರ ಬ್ಯಾಂಕುಗಳ ದಿನನಿತ್ಯದ ಚಟುವಟಿಕೆಗಳು ಕುಂಠಿತವಾಗಿದೆ. ಗ್ರಾಹಕರಿಗೂ ತುಂಬಾ ತೊಂದರೆಯಾಗುತ್ತಿದೆ. ತುರ್ತು ಹಣದ ಅವಶ್ಯಕತೆ ಇದ್ದವರು ಸ್ಥಿರಾಸ್ತಿಗಳನ್ನು ಅಡಮಾನ ಮಾಡಿ ತೆಗೆದುಕೊಳ್ಳುವ ಸಾಲಗಳು ಸಕಾಲಕ್ಕೆ ಉಪಯೋಗಕ್ಕೆ ಬಾರದೆ ಪರಿತಪಿಸುತ್ತಿದ್ದಾರೆ.
ಬ್ಯಾಂಕುಗಳು ಸಾಲವನ್ನು ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಡಿಟಿಡಿ ಮಾಡಬೇಕಿದೆ. ಆದರಿಂದ ಸರ್ಕಾರ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಡಿಟಿಡಿ ನೋಂದಣಿಗೆ ತೊಂದರೆ ಆಗದಂತೆ ಮಾರ್ಗದರ್ಶನ ನೀಡಬೇಕು. ಆಸ್ತಿಗಳ ನೋಂದಣಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಮೋಸ-ವಂಚನೆ ತಡೆಗಟ್ಟುವಲ್ಲಿ ಸರ್ಕಾರ ತೆಗೆದುಕೊಳ್ಳುವ ಯಾವುದೇ ಉಪಕ್ರಮಗಳಿಗೆ ಜನತೆಯ ವಿರೋಧ ಇಲ್ಲ. ಪೂರ್ವ ತಯಾರಿ ಇಲ್ಲದೆ ದಿಢೀರ್ ತೀರ್ವನದಿಂದ ಪ್ರತಿನಿತ್ಯ ಸಾವಿರಾರು ಜನರು ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ನಷ್ಟವಾಗುತ್ತಿದೆ. ಗಂಭೀರತೆ ಅರಿತು ಕೂಡಲೇ ಸರ್ಕಾರ ಕ್ರಮವಹಿಸಲು ಸಹಕಾರ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ಪರವಾಗಿ ಆಗ್ರಹಿಸುತ್ತಿರುವುದಾಗಿ ಡಾ. ಎಂ.ಆರ್. ವೆಂಕಟೇಶ್ ತಿಳಿಸಿದ್ದಾರೆ.
ಈಗಿರುವ ಪದ್ಧತಿ ಏನು?: ಕಾವೇರಿ 2.0 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ನಲ್ಲಿ ನೋಂದಣಿಗೆ ದಸ್ತಾವೇಜು ಅಪ್ಲೋಡ್ ಮಾಡಿ ಎನಿವೇರ್ ರಿಜಿಸ್ಟ್ರೇಷನ್ ಅನ್ವಯ ತನಗೆ ಬೇಕಾದ ಉಪನೋಂದಣಿ ಕಚೇರಿ ಆಯ್ಕೆ ಮಾಡಿಕೊಂಡು ಖುದ್ದು ಹಾಜರಾಗಿ ಅಸಲಿ ದಾಖಲೆ ಪತ್ರ ಹಾಜರುಪಡಿಸುತ್ತಿದ್ದರು. ದಾಖಲೆ ಪರಿಶೀಲಿಸಿ, ಶುಲ್ಕ ವಸೂಲಿ ಮಾಡಿ ಬೆರಳಚ್ಚು ಮತ್ತು ಪೋಟೋ ಪಡೆದು ನೋಂದಣಿ ಪ್ರಕ್ರಿಯೆ ಮುಗಿಸುತ್ತಿದ್ದರು. ನಕಲಿ ದಾಖಲೆ ಮತ್ತು ಬದಲಿ ವ್ಯಕ್ತಿಗಳ ಹಾಜರಿಗೆ ಸಾಧ್ಯವಿರಲಿಲ್ಲ. ಜನರಿಗೂ ಗೊಂದಲ ಇಲ್ಲದೆ ನೋಂದಣಿ ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ. ಹೊಸ ಪದ್ಧತಿಯಲ್ಲಿ ಪೂರ್ವ ಪರಿಶೀಲನೆ ಯಾವ ಅಧಿಕಾರಿ ನಡೆಸುತ್ತಾರೆ ಎಂಬುದು ತಿಳಿಯುವುದಿಲ್ಲ. ಅರ್ಜಿ ರದ್ಧುಪಡಿಸಿದರೆ ಯಾರ ಮುಂದೆ ಹಾಜರಾಗಬೇಕೆಂಬುದು ಗೊತ್ತಾಗದೆ ಸಾರ್ವಜನಿಕರಿಗೆ ಗೊಂದಲ ಸೃಷ್ಟಿಯಾಗಲಿದೆ.