

ಹೊಳೆಹೊನ್ನೂರು: ಭಾನುವಾರ ಬೆಳಗ್ಗೆಯಿಂದ ನಿರಂತರ ಸುರಿದ ಮಳೆಯಿಂದಾಗಿ ಪಟ್ಟಣ ಸುತ್ತಮುತ್ತಲಿನ ಗ್ರಾಮಸ್ಥರು ಹೈರಾಣಾದರು.
ಗ್ರಾಮಾಂತರದಲ್ಲಿ ಅಡಕೆ ಮೂರನೇ ಕೊಯ್ಲು ಭರದಿಂದ ಸಾಗುತ್ತಿದೆ. ಭಾನುವಾರ ನಸುಕಿನಲ್ಲಿ ಅಕ್ಕಪಕ್ಕದ ತಾಲೂಕುಗಳ ತೋಟಗಳಿಂದ ಅಡಕೆ ತರಲು ಹೋದ ಕೂಲಿ ಕಾರ್ಮಿಕರು ತೊಯ್ದು ತೊಪ್ಪೆಯಾಗಿ ಬರಿಗೈಯಲ್ಲಿ ವಾಪಸಾಗಿದ್ದಾರೆ. ನಾಲ್ಕೈದು ದಿನಗಳಿಂದ ಮೋಡ ಮುಸುಕಿದ ವಾತಾರಣವಿದ್ದು, ಸಂಸ್ಕರಿಸಿ ಕಣಗಳಲ್ಲಿ ಒಣಗಲು ಹಾಕಿರುವ ಅಡಕೆ ಕೊಳೆತು ಕಪ್ಪಾಗುತ್ತಿದೆ.
ಹೊಳೆಹೊನ್ನೂರಿನ ಚನ್ನಗಿರಿ ರಸ್ತೆಯಲ್ಲಿ ಬಹುತೇಕ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ನಾಗಸಮುದ್ರದ ಕಲ್ಯಾಣ ಮಂಟಪದ ಎದುರಿನ ಚರಂಡಿ ಮೋರಿ ಕುಸಿದು ಮಳೆ ನೀರು ಗ್ರಾಮದೊಳಗೆ ನುಗ್ಗುತ್ತಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೂಡ್ಲಿಯ ಸಂಗಮಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆನವೇರಿಯ ಮತ್ತಿಹಳ್ಳ ಭರ್ತಿಯಾಗಿ ಕೆ.ಕೆ ರಸ್ತೆ ಮೇಲೆ ಹರಿದ ಪರಿಣಾಮ ಸಾಸ್ವೇಹಳ್ಳಿ, ಹೊನ್ನಾಳಿ ಭಾಗದ ವಾಹನ ಸಂಚಾರಕ್ಕೆ ಅಡೆಚಣೆಯಾಯಿತು. ಅಡಕೆ ತೋಟಗಳಲ್ಲಿ ಬಸಿ ಗಾಲುವೆಗಳಲ್ಲಿ ನಿಂತಿದ್ದ ನೀರನ್ನು ಬೆಳೆಗಾರರು ಹೊರಹಾಕುತ್ತಿದ್ದಾರೆ.