

ಮೈಸೂರು : ಸರಗೂರು ಪಟ್ಟಣದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಮೊಬೈಲ್ ಕರೆಗಳು ಏಕಾಏಕಿ ಕಡಿತವಾಗುತ್ತಿದ್ದು, ಗ್ರಾಹಕರು ಹೈರಾಣರಾಗಿದ್ದಾರೆ. ಕಾಲ್ ಕನೆಕ್ಟ್ ಆದರೂ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಕೆಲವೊಮ್ಮ ನಾಟ್ ರೀಚಬಲ್ ಬರುತ್ತದೆ ಎಂದು ಗ್ರಾಹಕರು ದೂರುತ್ತಿದ್ದು, ಇತರೆ ಸಿಮ್‌ಗಳಿಗೆ ಪೋರ್ಟ್ ಆಗುತ್ತಿದ್ದಾರೆ.
ಸರ್ಕಾರಿ ಅಧಿಕಾರಿಗಳಿಗೆ ಬಿಎಸ್‌ಎನ್‌ಎಲ್ ಸಿಮ್ ನೀಡಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದ ಜನರು ಯಾವ ಅಧಿಕಾರಿಗೂ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಸಾರ್ವಜನಿಕರ ಕೆಲಸಗಳು ಸರಾಗವಾಗಿ ನಡೆಯುತ್ತಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸ್ಥಿರ ಹಾಗೂ ಸಂಚಾರಿ ದೂರವಾಣಿ ಸಂಪರ್ಕಕ್ಕೆ ಸರ್ಕಾರ ಬದಲಿ ವ್ಯವಸ್ಥೆ ಮಾಡಬೇಕಿದೆ. ಇಲ್ಲವಾದರಲ್ಲಿ ಜನರಿಗೆ ತೊಂದರೆ ಎದುರಾಗಲಿದೆ ಎನ್ನುತ್ತಾರೆ ಜನರು.
ಈ ಬಗ್ಗೆ ಕೊತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವಪ್ಪ ಮಾತನಾಡಿ, ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಮ ಪಂಚಾಯಿತಿ, ನಾಡ ಕಚೇರಿಗಳಲ್ಲಿ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಮ್ ಗ್ರಾಹಕ, ಕಂದೇಗಾಲ ಗ್ರಾಮದ ದೊಡ್ಡಯ್ಯ, ಹಲವಾರು ವರ್ಷಗಳಿಂದ ನಾನು ಬಿಎಸ್‌ಎನ್‌ಎಲ್ ಸಿಮ್ ಉಪಯೋಗಿಸುತ್ತಿದ್ದೇನೆ. ಸಮಸ್ಯೆ ಇರುವುದಂತೂ ಸತ್ಯ ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಸಮಸ್ಯೆ ಬಗ್ಗೆ ನಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಯೊಬ್ಬರು ತಿಳಿಸಿದರು.