

ಶಿವಮೊಗ್ಗ: ರಾಮ ಎಲ್ಲರ ಮನೆ, ಮನಸ್ಸಲ್ಲೂ ನೆಲೆಸಿದ್ದು ಸಂಕಷ್ಟಗಳನ್ನು ದೂರ ಮಾಡುವ ಶಕ್ತಿ ಶ್ರೀರಾಮನಾಮ ಜಪಕ್ಕಿದೆ ಎಂದು ತೀರ್ಥಹಳ್ಳಿ ಭೀಮನಕಟ್ಟೆಯ ಶ್ರೀ ರಘುವರೇಂದ್ರ ತೀರ್ಥಶ್ರೀಪಾದಂಗಳವರು ಹೇಳಿದರು.
ನಗರದ ಗಾಡಿಕೊಪ್ಪದ ಲಗಾನ್ ಕಲ್ಯಾಣ ಮಂದಿರದಲ್ಲಿ ವಿಪ್ರ ಯುವ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ತೇರಾ ಕೋಟಿ ಶ್ರೀ ರಾಮ ತಾರಜ ಜಪ ಸಾಂಗತ ಯಜ್ಞದಲ್ಲಿ ಭಾನುವಾರ ಆಶೀರ್ವಚನ ನೀಡಿದ ಅವರು, ರಾಮ ಎಂಬ ಹೆಸರೇ ಒಂದು ಶಕ್ತಿಯಾಗಿದೆ. ರಾಮನನ್ನು ನಿತ್ಯವೂ ಆರಾಧಿಸುವ ಮೂಲಕ ಸ್ಮರಣೆ ಮಾಡುವುದರಿಂದ ಜೀವನದಲ್ಲಿ ಸಕರಾತ್ಮಕ ಫಲವನ್ನು ಕಾಣಬಹುದಾಗಿದೆ ಎಂದರು.
ರಾಮನ ಶಕ್ತಿ, ತೇಜಸ್ಸು, ವಾತ್ಸಲ್ಯಮಯಿ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ರಾಮ ಕೇವಲ ಹಿಂದುಗಳಿಗೆ ಮಾತ್ರವಲ್ಲ, ಇಡೀ ವಿಶ್ವದಲ್ಲಿರುವ ಸಮಸ್ತ ಮಾನವ ಕುಲಕ್ಕೂ ಆದರ್ಶಪ್ರಾಯವಾಗಿದ್ದಾನೆ ಎಂದು ಬಣ್ಣಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಬಳಿಕ ಎಲ್ಲೆಲ್ಲೂ ರಾಮನಾಮ ಜಯ ಜಯ ರಾಮ ಜಪ ಮೊಳಗುತ್ತಿದೆ. ಎಲ್ಲ ಧರ್ಮದವರು, ಜಾತಿಯವರು ರಾಮ ನಾಮ ಜಪ ಮಾಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದರು. ಕೋಟೆ ಗಂಗೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಸರಸ್ವತಿಗಳು ಸಾನ್ನಿಧ್ಯ ವಹಿಸಿದ್ದರು. ವಿಪ್ರ ಯುವ ಪರಿಷತ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಗಾನ್ ಕಲ್ಯಾಣ ಮಂದಿರದಲ್ಲಿ ಮೂರು ದಿನಗಳ ಶ್ರೀ ರಾಮ ತಾರಕ ಜಪ ಯಜ್ಞವು ಸಂಪನ್ನಗೊಂಡಿತು. ವಿದ್ವಾನ್ ಶಂಕರಾನಂದ ಜೋಯ್ಸ, ಶ್ರೀ ರವಿಶಂಕರ ಸೋಮಯಾಜಿ, ವಿದ್ವಾನ್ ಲಕ್ಷ್ಮೀನಾರಾಯಣ ಭಟ್, ಶ್ರೀ ಜಯತೀರ್ಥ ಆಚಾರ್ ಅಗ್ನಿಹೋತ್ರಿಗಳು, ಶ್ರೀಓ ಕಾರಕೋಡ್ಲು ಗುರುಮೂರ್ತಿ, ಎಚ್.ರಾಮಚಂದ್ರ ಭಟ್, ದತ್ತಾತ್ರಿ ಭಟ್, ವಿಷ್ಣುಮೂರ್ತಿ ಉಡುಪ ಅವರನ್ನೊಳಗೊಂಡಂತೆ ಪ್ರಧಾನ ಋತ್ವಿಜರು ಜಪ ಯಜ್ಞ ನೆರವೇರಿಸಿದರು.
ಇದೇ ವೇಳೆ ಸೇವಕರ್ತರಾದ ಪ್ರತಿಮಾ ಮತ್ತು ಸಂತೋಷ್ ಅವರಿಂದ ಶ್ರೀರಾಮ ಪಟ್ಟಾಭಿಷೇಕ ಅದ್ಧೂರಿಯಾಗಿ ನೆರವೇರಿತು. ಬೆಳಗ್ಗೆ ಕಾಕಡಾರತಿ, ರಾಗರಂಜನಿ ಟ್ರಸ್ಟ್‌ನಿಂದ ಭಜನೆ, ಗೋಪೂಜೆ ಸಹಿತ ಶ್ರೀರಾಮತಾರಕ ಹೋಮ ನೆರವೇರಿತು. ಬಳಿಕ ಸಾಧು-ಸಂತರಿಂದ ಮಹಾ ಪೂರ್ಣಾಹುತಿಯನ್ನು ಸಾಂಘವಾಗಿ ನೆರವೇರಿಸಲಾಯಿತು.