

ಬೆಂಗಳೂರು: ರಾಜ್ಯದ ಏಳು ಕೋಟಿ ಜನರ ಸಮೀಕ್ಷೆ ಮಾಡುವುದು ಅಷ್ಟು ಸುಲಭವಲ್ಲ. ವಿವಿಧ ಕಾರಣಗಳಿಂದ ಶೇಕಡ ನೂರರಷ್ಟು ಗುರಿ ಸಾಧಿಸುವುದು ಕಷ್ಟ, ಕಷ್ಟ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಅ.7ಕ್ಕೆ ಸಮೀಕ್ಷೆ ಮುಗಿಸುತ್ತೇವೆ ಎಂದಿದ್ದೆವು. ಈ ಕಾರಣಕ್ಕೆ ಸಭೆ ನಡೆಸಿ ಸಮೀಕ್ಷೆ ಪ್ರಗತಿ ಪರಿಶೀಲಿಸಿ, ಪುನರ್ ವಿಮರ್ಶೆ ಮಾಡಿದ್ದೇವೆ. ಆರಂಭಿಕ ತೊಂದರೆ ಸಹಜವಾಗಿದ್ದರೂ ಹಲವು ಜಿಲ್ಲೆಗಳಲ್ಲಿ ನಿರೀಕ್ಷೆಯಂತೆ ಪ್ರಗತಿ ಸಾಧಿಸಲಾಗಿದೆ ಎಂದರು.
ಬೆಂಗಳೂರು ನಗರದ ಅಂಕಿ-ಅಂಶಗಳು ಗಮನಿಸಿದಾಗ ಇನ್ನೂ 10 ದಿನಗಳು ಬೇಕಾಗುತ್ತವೆ ಎಂದುಕೊಂಡಿದ್ದೆವು. ಹೆಚ್ಚುವರಿ 10 ದಿನಗಳ ಕಾಲಾವಕಾಶ ಕೊಟ್ಟರೆ ಎಲ್ಲ ಮುಗಿಸುತ್ತೇವೆ ಎಂದು ಶಿಕ್ಷಕರ ಸಂಘದವರು ಹೇಳಿದ್ದಾರೆ ಎಂದು ಮಧುಸೂದನ್‌ನಾಯ್ಕ ತಿಳಿಸಿದರು.
ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿದ್ದು, ಈವರೆಗೆ 3.80 ಲಕ್ಷ ಮನೆಗಳ ಸಮೀಕ್ಷೆಯಾಗಿರಬಹುದು. ಬೆಂಗಳೂರಿನ ಜನರ ಮನವೊಲಿಕೆಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಕೆಲವು ಜನರು ಇದರಿಂದ ನಮಗೆ ಪ್ರಯೋಜನವಾಗುವುದಿಲ್ಲ ಎಂದು ಅನ್ನಿಸಿರಬಹುದು ಎಂದರು.
ಜನರ ಸ್ಥಿತಿಗತಿ ತಿಳಿಯಲು ಸಮೀಕ್ಷೆಯಲ್ಲಿ 60 ಪ್ರಶ್ನೆಗಳ ಕೇಳಲಾಗುತ್ತಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಯ ವಾಸ್ತವಾಂಶ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಆನ್‌ಲೈನ್‌ನಲ್ಲಿ ಇದುವರೆಗೆ 44 ಸಾವಿರ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ 19 ಸಾವಿರ ಜನರು ದಕ್ಷಿಣಕನ್ನಡ ಜಿಲ್ಲೆಗೆ ಸೇರಿದವರು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ ಮಾಹಿತಿ ನೀಡಿದರು.