

ಸುಮಾರು ಹದಿನೈದು ವರ್ಷಗಳ ಹಿಂದೆ ದೇಶದ ಬಹುತೇಕರ ಮನೆಗಳಲ್ಲಿ ಹೆಚ್ಚಾಗಿ ಸೌದೆ ಒಲೆಗಳು ಇದ್ದವು. ಅಲ್ಲದೆ, ಸೀಮೆ ಎಣ್ಣೆ ಸ್ಟೌ ಬಳಸುತ್ತಿದ್ದರು. ಆದರೆ, ಇಂದು ಪ್ರತಿ ಮನೆಗಳನ್ನೂ ಎಲ್ಪಿಜಿ ಸಿಲಿಂಡರ್ ಆವರಿಸಿಕೊಂಡಿದ್ದು, ಮಹಿಳೆಯರು ಹೊಗೆ ಮುಕ್ತ ಅಡಿಗೆ ಮಾಡುತ್ತಿದ್ದಾರೆ. ಪಾತ್ರೆಗಳಲ್ಲಿ ಕಲೆಗಳು ಕೂಡ ಇರುವುದಿಲ್ಲ. ಗ್ಯಾಸ್ ಸಿಲಿಂಡರ್ ಇಂದು ಎಲ್ಲರ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ.
ಆರಂಭದಲ್ಲಿ ಎಲ್ಪಿಜಿ ದರ ಜನರಿಗೆ ಭಾರವಿರಲಿಲ್ಲ. ಆದರೆ, ಕಳೆದ ಐದಾರು ವರ್ಷಗಳಲ್ಲಿ ಎಲ್ಪಿಜಿ ದರ ಸಾಮಾನ್ಯ ಜನರನ್ನು ಚಿಂತೆಗೆ ದೂಡಿದೆ. ಸಿಲಿಂಡರ್ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಜನರ ಜೇಬು ಸುಡುತ್ತಿದೆ. ಅದರಲ್ಲೂ ಮಧ್ಯಮ ವರ್ಗದ ಜನರ ಕತೆಯಂತೂ ಹೇಳತೀರದು. ಗ್ಯಾಸ್ ಬೆಲೆ ಕೇಳಿದಾಗಲೆಲ್ಲ ಸರ್ಕಾರಕ್ಕೆ ಹಿಡಿಶಾಪ ಹಾಕುವ ಜನರೇ ಹೆಚ್ಚು. ಕೆಲವರು ವಾಪಸ್ ಸೌದೆ ಒಲೆಗೆ ಮರಳಿದ್ದಾರೆ. ಇನ್ನು ಕೆಲವರು ಇಂಡಕ್ಷನ್ ಸ್ಟೌ ಅವಲಂಬಿಸಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಎಲ್ಪಿಜಿ ಸಿಲಿಂಡರ್ ಬಳಕೆಯ ಮೇಲೆ ಹೆಚ್ಚು ಗಮನ ಹರಿಸಬೇಕು. ಅದರರ್ಥ ಉಳಿತಾಯದ ಕಡೆ ಗಮನ ಕೊಡಬೇಕು. ಗ್ಯಾಸ್ ಅನ್ನು ಹೇಗೆ ಉಳಿತಾಯ ಮಾಡಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಸರಳ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಮನೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ.
ಶುಚಿಯಾಗಿರಲಿ ಬರ್ನರ್
ಗ್ಯಾಸ್ ಸ್ಟೌವ್ನಲ್ಲಿರುವ ಬರ್ನರ್ ಅನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಕೊಳಕು ಮುಕ್ತವಾಗಿ ಇರಿಸಬೇಕು. ಕೊಳೆಯು ಗ್ಯಾಸ್ ಅನ್ನು ಮುಚ್ಚಬಹುದು ಮತ್ತು ಇದರಿಂದ ಸಮಸ್ಯೆಗಳು ಉಂಟಾಗಬಹುದು. ಕೊಳೆಯಿದ್ದಾಗ ಉರಿಯು ಸೌಮ್ಯವಾಗಿಯೇ ಇಗಿರುತ್ತದೆ. ಆದರೆ, ಗ್ಯಾಸ್ ಖಾಲಿಯಾಗುತ್ತಲೇ ಇರುತ್ತದೆ. ಬರ್ನರ್ ಕೊಳಕಾಗಿದ್ದರೆ ಗ್ಯಾಸ್ ಸೋರಿಕೆಯಾಗುವ ಸಾಧ್ಯತೆಯು ಇದೆ. ಅಲ್ಲದೆ, ಸಿಲಿಂಡರ್ ಕೂಡ ಬೇಗ ಸವೆಯುತ್ತದೆ. ಹೀಗಾಗಿ ಗ್ಯಾಸ್ ಸ್ಟೌವ್ ಬರ್ನರ್ ಅನ್ನು ಯಾವಾಗಲೂ ಸ್ವಚ್ಛವಾಗಿಡಿ.
ಒದ್ದೆ ಪಾತ್ರೆಗಳೊಂದಿಗೆ ಅಡುಗೆ
ಕೆಲವರು ಮುಂಜಾನೆ ಎದ್ದಾಗ ಬೇಗ ಕೆಲಸ ಮುಗಿಸಲು ಇಷ್ಟಪಡುತ್ತಾರೆ. ಪಾತ್ರೆಗಳನ್ನು ಸ್ವಚ್ಛಗೊಳಿಸಿದ ತಕ್ಷಣ ಒದ್ದೆಯಾದ ಪಾತ್ರೆಗಳೊಂದಿಗೆ ಅಡುಗೆ ಮಾಡುತ್ತಾರೆ. ಇನ್ನು ಕೆಲವು ರಾತ್ರಿ ಒಣಗಲು ಬಿಟ್ಟ ಪಾತ್ರೆಗಳನ್ನು ಮರುದಿನ ಬೆಳಗ್ಗೆ ತರಾತುರಿಯಲ್ಲಿ ಸ್ವಚ್ಛಗೊಳಿಸಿ ಅಡುಗೆಗೆ ಬಳಸುತ್ತಾರೆ. ಆದರೆ, ಈ ರೀತಿ ಮಾಡುವುದು ತಪ್ಪು. ಏಕೆಂದರೆ, ಒದ್ದೆಯಾದ ಪಾತ್ರೆಗಳು ಒಣಗಲು 2 ರಿಂದ 4 ನಿಮಿಷಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಹೆಚ್ಚಿನ ಗ್ಯಾಸ್ ಬಳಕೆಯಾಗುತ್ತಿದೆ. ನಿತ್ಯವೂ ಇದೇ ಅಭ್ಯಾಸವಿದ್ದರೆ ಗ್ಯಾಸ್ ಬಹುಬೇಗನೆ ಖಾಲಿಯಾಗುತ್ತದೆ. ಹೀಗಾಗಿ ರಾತ್ರಿಯೇ ತೊಳೆದಿಟ್ಟು ಬೆಳಗ್ಗೆ ಉಪಯೋಗಿಸಿದರೆ ಕೆಲಸವೂ ಬೇಗ ಆಗುತ್ತದೆ ಮತ್ತು ಗ್ಯಾಸ್ ಕೂಡ ಉಳಿತಾಯವಾಗುತ್ತದೆ.
ಮುಚ್ಚಳ ಮರೆಯಬೇಡಿ
ಅಡುಗೆ ಮಾಡುವಾಗ ಪಾತ್ರೆಗಳನ್ನು ಮುಚ್ಚುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ತರಕಾರಿ ಬೇಯಿಸುವುದಿರಲಿ, ಅನ್ನ ಬೇಯಿಸುವುದಿರಲಿ ಮುಚ್ಚಳ ಹಾಕಿದರೆ ಬೇಗ ಬೇಯುತ್ತದೆ. ಕುಕ್ಕರ್ ಬಳಸಿದರೆ ಗ್ಯಾಸ್ ಉಳಿತಾಯವಾಗುತ್ತದೆ. ಮುಚ್ಚಳ ಮುಚ್ಚದೆ ಅಡುಗೆ ಮಾಡಿದರೆ ಹೆಚ್ಚಿನ ಗ್ಯಾಸ್ ಖರ್ಚಾಗುತ್ತದೆ.
ಕೊನೆಯಲ್ಲಿ ಪ್ರಮುಖ ವಿಚಾರ ಏನೆಂದರೆ, ಎಲ್ಪಿಜಿ ಸಿಲಿಂಡರ್ ಮೂಲಕ ಅಡುಗೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಮರೆಯಬೇಡಿ. (ಏಜೆನ್ಸೀಸ್)