ಮೇಡಮ್​ಗೆ ಕೇಸರಿ ಶಾಲು ಹಾಕಿಲ್ವಾ? ಎಂದು ಸುಮಲತಾ ಕಾಲೆಳೆದ ಪ್ರತಾಪ್​ಸಿಂಹ

Sumalatha Pratap Simha
Published on

ಮಂಡ್ಯ: ಸಂಸದೆ ಸುಮಲತಾ ಅವರು ಇಂದು ಬಹಿರಂಗವಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಿಗೆ ರಾಜ್ಯದಲ್ಲಿ ಈ ವಿಚಾರ ಭಾರಿ ಗಮನ ಸೆಳೆದಿದೆ. ಇದೀಗ ಅದೇ ಹಿನ್ನೆಲೆಯಲ್ಲಿ ಕೇಸರಿ ಶಾಲಿನ ವಿಚಾರ ಮುನ್ನೆಲೆಗೆ ಬಂದಿದೆ. ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡು ಸಂಸದ ಪ್ರತಾಪ್​ಸಿಂಹ, ಸುಮಲತಾ ಅವರ ಕಾಲೆಳೆದ ಪ್ರಸಂಗವೂ ನಡೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಲ್ಲೀಗ ಭಾರಿ ಪೂರ್ವತಯಾರಿ ನಡೆಯುತ್ತಿದೆ. ಪ್ರಧಾನಿ ಭಾಗಿಯಾಗಲಿರುವ ಕಾರ್ಯಕ್ರಮದ ವೇದಿಕೆ ಸಿದ್ಧತೆ ವೀಕ್ಷಣೆಗಾಗಿ ಸಚಿವ ಕೆ.ಗೋಪಾಲಯ್ಯ, ಸಂಸದರಾದ ಪ್ರತಾಪ್​ ಸಿಂಹ ಮತ್ತು ಸುಮಲತಾ ಇಂದು ಮಂಡ್ಯದ ಗಜ್ಜಲಗೆರೆ ಬಳಿಗೆ ಭೇಟಿ ನೀಡಿದ್ದಾರೆ.

ಸಚಿವ ಗೋಪಾಲಯ್ಯ, ಸಂಸದರಾದ ಪ್ರತಾಪ್ ಸಿಂಹ‌, ಸುಮಲತಾ ವೇದಿಕೆ ಸಿದ್ಧತೆ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ಮೇಡಮ್​ಗೆ ಯಾಕೆ ಕೇಸರಿ ಶಾಲು ಹಾಕಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್​ಗೆ ಪ್ರತಾಪ್​​ ಸಿಂಹ ಪ್ರಶ್ನೆ ಮಾಡುವ ಮೂಲಕ ಸುಮಲತಾ ಅವರಿಗೆ ತಮಾಷೆ ಮಾಡಿದ್ದರು. ಇದಕ್ಕೆ ಸುಮಲತಾ ನಗುತ್ತಲೇ ಉತ್ತರಕೊಟ್ಟು ಕೇಸರಿ ಶಾಲು ಹಾಕಿಕೊಂಡ ಪ್ರಸಂಗವೂ ನಡೆಯಿತು.

ಕಳೆದ ವಾರ ಮೋದಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲೂ ಸಂಸದೆ ಸುಮಲತಾ ಭಾಗಿಯಾಗಿದ್ದರೂ ಅಂದು ಅವರು ಕೇಸರಿ ಶಾಲನ್ನು ಧರಿಸಿರಲಿಲ್ಲ. ಸಭೆಗೆ ಸ್ವಾಗತಿಸಿದ್ದ ಬಿಜೆಪಿ ಮುಖಂಡರು ಕೇಸರಿ ಶಾಲನ್ನು ನೀಡಿದ್ದರು. ಆದರೆ ಆ ಶಾಲನ್ನು ಸಂಸದೆ ಸುಮಲತಾ ಕೈಯಲ್ಲೇ ಹಿಡಿದು ಕುಳಿತಿದ್ದರು. ಅಂದು ಆ ಸಭೆಯಲ್ಲಿ ಕೂಡ ಪ್ರತಾಪ್ ಸಿಂಹ ಇದ್ದಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಗೋಪಾಲಯ್ಯ ಇದ್ದಿದ್ದರು. ಇದು ಅದೇ ವಿಚಾರವನ್ನು ನೆನಪಿಸಿಕೊಂಡು ಪ್ರತಾಪ್​ ಸಿಂಹ ಸಂಸದೆಯ ಕಾಲೆಳೆದಿದ್ದು, ಕೇಸರಿ ಶಾಲು ನೀಡುವಂತೆ ಪರೋಕ್ಷವಾಗಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net