

ಜೈಪುರ್: ಕಾಂಗ್ರೆಸ್ ವರಿಷ್ಠರೊಂದಿಗೆ ಮುನಿಸಿಕೊಂಡು, ಸಿಎಂ ಅಶೋಕ್ ಗೆಹ್ಲೋಟ್ ಜತೆ ಹಗೆತನ ಸಾಧಿಸಿಕೊಂಡು ಕಳೆದ ಒಂದು ತಿಂಗಳಿನಿಂದ ಪಕ್ಷದಿಂದ ದೂರವಿದ್ದ ಸಚಿನ್ ಪೈಲಟ್ ಮಂಗಳವಾರ ರಾತ್ರಿ ಜೈಪುರ್ಗೆ ಮರಳಿದರು. ಅವರ ಬೆಂಬಲಿಗರು ಭರ್ಜರಿ ಸ್ವಾಗತ ನೀಡಿ ಬರಮಾಡಿಕೊಂಡರು.
ರಾಜಸ್ಥಾನದ ಡಿಸಿಎಂ ಹುದ್ದೆ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಯಾವುದೇ ಆಕಾಂಕ್ಷಿಯಲ್ಲ ಹಾಗೂ ಯಾವುದೇ ರಾಜಕೀಯ ಕಲಹಕ್ಕೂ ಅವಕಾಶವಿಲ್ಲ ಎಂದು ಹೇಳಿದರು.
ದೆಹಲಿಯಿಂದ ಜೈಪುರ್ನಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ ಪೈಲಟ್ ಜತೆಗೆ ಬಂಡಾಯ ಶಾಸಕರು ಹಾಜರಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಚಿನ್ ಪೈಲಟ್ ಜೈಪುರ್ಗೆ ಬರುವ ಮುನ್ನವೇ ಸಿಎಂ ಅಶೋಕ್ ಗೆಹ್ಲೋಟ್ ಜೈಸಲ್ಮೇರ್ಗೆ ಪ್ರಯಾಣಿಸಿದರು. ಆಗಸ್ಟ್ 14ರಂದು ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಕಾಂಗ್ರೆಸ್ ಶಾಸಕರನ್ನು ಇರಿಸಲಾಗಿರುವ ರೆಸಾರ್ಟ್ನಲ್ಲಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ಪಕ್ಷದ ಶಾಸಕರ ಮನಸ್ಸನ್ನು ಮತ್ತೆ ಗೆಲ್ಲುವ ಸವಾಲು ಹಾಗೂ ಹೊಣೆಗಾರಿಕೆ ಪೈಲಟ್ದಾಗಿದೆ ಎಂದು ಪ್ರತಿಕ್ರಿಯಿಸಿದರು.
ಪಕ್ಷದಲ್ಲಿ ಶಾಂತಿ ಹಾಗೂ ಭಾತೃತ್ವ ನೆಲೆಸಿರಬೇಕು. ಮೂರು ಸದಸ್ಯರ ಸಮಿತಿ ಕೈಗೊಳ್ಳುವ ನಿರ್ಣಯಗಳನ್ನು ಆಧರಿಸಿಯೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗೆಹ್ಲೋಟ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.