ಕೈ ಪಾಳಯದಲ್ಲಿ ಕಣ್ಮರೆಯಾಯ್ತೇ ಹುಮ್ಮಸ್ಸು?

Published on

ನಿಖಿಲ್​ರಾಜ್​ಗೆ ಜಿಲ್ಲಾ ಯುವ ಕಾಂಗ್ರೆಸ್​ ಪಟ್ಟ | ಆಂತರಿಕ ಚುನಾವಣೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ವಿಶೇಷ ವರದಿ ತುಮಕೂರು
ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿದ್ದರೂ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಈ ಹಿಂದೆ ಇದ್ದಷ್ಟು ಜೋಶ್​ ಕಾಣುತ್ತಿಲ್ಲ. ಸರ್ಕಾರದಲ್ಲಿ ಪ್ರಭಾವಿ ಸ್ಥಾನ ಪಡೆದಿರುವ ಸಚಿವದ್ವಯರು ಸೇರಿ 7 ಕೈ ಶಾಸಕರು ಜಿಲ್ಲೆಯಲ್ಲಿದ್ದರೂ ಯುವ ಕಾಂಗ್ರೆಸ್​ ಕಾರ್ಯಕರ್ತರಲ್ಲಿ ಅಷ್ಟಾಗಿ ಹುಮ್ಮಸ್ಸು ಕಾಣುತ್ತಿಲ್ಲ. ಹಾಗಾಗಿ, ಆ.20ರಿಂದ ಆರಂಭವಾಗಿರುವ ಯುವ ಕಾಂಗ್ರೆಸ್​ ಸದಸ್ಯತ್ವ ನೋಂದಣಿ ಹಾಗೂ ಚುನಾವಣೆ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಎಲ್ಲಿಯೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿಲ್ಲ.


ಈ ಬಾರಿ ಜಿಲ್ಲಾ ಯುವ ಕಾಂಗ್ರೆಸ್​ನ ಆಂತರಿಕ ಚುನಾವಣೆ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಪಕ್ಷದೊಳಗೆ ಪರಸ್ಪರ ಪೈಪೋಟಿ, ಗುಂಪುಗಾರಿಕೆ ಸೃಷ್ಟಿಯಾಗಲಿದೆ ಎಂಬ ಕಾರಣಕ್ಕೆ ಅಸೆಂಬ್ಲಿ ಹಾಗೂ ಬ್ಲಾಕ್​ ಕಾಂಗ್ರೆಸ್​ಗಳಿಗೆ ಈಗಾಗಲೇ ಬಹುತೇಕ ಅವಿರೋಧ ಆಯ್ಕೆ ನಡೆದಿದೆ. ಯುವ ಕಾಂಗ್ರೆಸ್​ ರಾಜ್ಯಾಧ್ಯಕ್ಷ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸೆಂಬ್ಲಿ ಅಧ್ಯಕ್ಷ ಹಾಗೂ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಚುನಾವಣೆ ಕಣ ಅಷ್ಟು ರಂಗು ಪಡೆದಿಲ್ಲ.


ತಿಪಟೂರು ಶಾಸಕ ಕೆ.ಷಡಕ್ಷರಿ ಸಹೋದರ ಜಿಪಂ ಮಾಜಿ ಸದಸ್ಯ ದಿವಂಗತ ಕೆ.ರಾಜಶೇಖರ್​ ಪುತ್ರ ನಿಖಿಲ್​ರಾಜ್​ ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ಗಮನಸೆಳೆಯುವಂತೆ ಮಾಡಿದೆ. ಎನ್​ಎಸ್​ಯುಐನ ಆಕಾಶ್​ ಸ್ಪರ್ಧಿಸಿದ್ದು, ಚುನಾವಣೆ ನೆಪಮಾತ್ರಕ್ಕೆ ಎಂಬಂತೆ ಇದೆ. ಜಿಲ್ಲೆಯವರೇ ಆದ ಇಲಾಹಿ ಸಿಕಂದರ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ತುರುವೇಕೆರೆಯ ಯೋಗೀಶ್​, ತಿಪಟೂರಿನ ಭರತ್​, ತುಮಕೂರಿನ ಮಹಮ್ಮದ್​ ಇಬ್ರಾಹಿಂ, ಮೋಹನ್​ಗೌಡ, ಅಮಾನ ಉಲ್ಲಾ ಖಾನ್​ ಸೇರಿ 8 ಮಂದಿ ಕಣದಲ್ಲಿದ್ದಾರೆ. 1 ತಿಂಗಳು ನಡೆಯಲಿರುವ ಚುನಾವಣಾ ಪ್ರಕ್ರಿಯೆ ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿಗೆ ಹೆಚ್ಚು ಪೂರಕವಾಗಿರಲಿದೆ.

ನಿಖಿಲ್​ಗೆ ಸಾರಥ್ಯ ನಿಶ್ಚಿತ: ಈ ಬಾರಿ ಯುವ ಕಾಂಗ್ರೆಸ್​ ಸಾರಥ್ಯ ಬಹುತೇಕ ನಿಖಿಲ್​ ರಾಜ್​ಗೆ ಒಲಿಯಲಿದೆ. ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದಿರುವ ನಿಖಿಲ್​ಗೆ ಯುವ ಮುಖಂಡ ವಿಧಾನಪರಿಷತ್​ ಸದಸ್ಯ ಆರ್​.ರಾಜೇಂದ್ರ, ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಮಠ್​ ಸಹ ಬೆಂಬಲ ಸೂಚಿಸಿದ್ದು, ಅಧ್ಯಕ್ಷ ಗಾದಿಗೇರುವ ಹಾದಿ ಸುಗಮವಾಗಿದೆ. ನಿಖಿಲ್​ ತಮ್ಮ ತಂದೆ ಹಾದಿಯಲ್ಲಿ ಜಿಪಂ ಪ್ರವೇಶಿಸಲು ಹವಣಿಸುತ್ತಿದ್ದು, ಹೊನ್ನವಳ್ಳಿ ಜಿಪಂ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

ತಿಂಗಳವರೆಗೆ ಎಲೆಕ್ಷನ್​: ಆ.20ರಿಂದ ಸೆ.20ರವರೆಗೆ 1 ತಿಂಗಳ ಕಾಲ ಯುವ ಕಾಂಗ್ರೆಸ್​ ಆಂತರಿಕ ಚುನಾವಣೆ ನಡೆಯಲಿರುವುದು ವಿಶೇಷ. ಆನ್​ಲೈನ್​ನಲ್ಲೇ ಸದಸ್ಯತ್ವ ನೋಂದಣಿ ಜತೆಗೆ ವೋಟಿಂಗ್​ ಪ್ರಕ್ರಿಯೆ ನಡೆಯಲಿದೆ. ವೈಸಿಇಎ (ಯೂತ್​ ಕಾಂಗ್ರೆಸ್​ ಎಲೆಕ್ಷನ್​ ಅಥಾರಿಟಿ) ಆ್ಯಪ್​ನಲ್ಲಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಮಾಡಿಕೊಂಡು ಅಲ್ಲಿಯೇ ಮತ ಚಲಾಯಿಸಬಹುದಾಗಿದೆ. ರಾಜ್ಯಾಧ್ಯಕ್ಷ ಸ್ಥಾನ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಸ್ಥಾನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿಲ್ಲೆಯ ಯುವ ಕಾಂಗ್ರೆಸ್​ ಕಾರ್ಯಕರ್ತರು ಹಕ್ಕು ಚಲಾಯಿಸಬಹುದಾಗಿದೆ. ಉಳಿದಂತೆ ಅಸೆಂಬ್ಲಿ, ಬ್ಲಾಕ್​ ಕಾಂಗ್ರೆಸ್​ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ದೀಪಿಕಾರೆಡ್ಡಿ, ಮಂಜುನಾಥ್​ ಗೌಡ ನೇರ ಫೈಟ್​: ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡುಬಂದಿದೆ. ಕಳೆದ ಬಾರಿ ಮಹಮ್ಮದ್​ ನಲ್​ಪಾಡ್​, ರಕ್ಷ ರಾಮಯ್ಯ ನಡುವಿನ ಕಾದಾಟಕ್ಕಿಂತ ಈ ಬಾರಿಯ ಪೈಪೋಟಿ ತೀವ್ರ ಕುತೂಹಲದಿಂದ ಕೂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬೆಂಬಲ ಪಡೆದಿರುವ ಮಂಜುನಾಥ್​ ಗೌಡ ಹಾಗೂ ಈ ಹಿಂದಿನ ಹಲವು ಯುವ ಕಾಂಗ್ರೆಸ್​ ಅಧ್ಯಕ್ಷರ ಅತ್ಯಾಪ್ತರೆನಿಸಿರುವ ದೀಪಿಕಾರೆಡ್ಡಿ ಸ್ಪರ್ಧೆ ಚುನಾವಣಾ ಕಣವನ್ನು ರಂಗೇರಿಸಿದೆ. ಜಿಲ್ಲೆಯಲ್ಲಿರೂ ದೀಪಿಕಾಗೆ ಹೆಚ್ಚಿನ ಬೆಂಬಲ ಇದೆ.

ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ಯುವ ಕಾಂಗ್ರೆಸ್​ ಆಂತರಿಕ ಚುನಾವಣೆ ನಡೆಯುತ್ತಿದೆ. ಗುಂಪುಗಾರಿಕೆ, ಬಣ ಸೃಷ್ಟಿಗೆ ಅವಕಾಶ ಕೊಡದಂತೆ ಪಕ್ಷ ಸಂಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡವರನ್ನು ಅಸೆಂಬ್ಲಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ. ಪಕ್ಷ ಬಲವರ್ಧನೆ, ಆರೋಗ್ಯಕರ, ಸ್ಪರ್ಧಾತ್ಮಕ ಚುನಾವಣೆಗೆ ಒತ್ತು ನೀಡಲಾಗಿದೆ.| ಶಶಿಹುಲಿಕುಂಟೆಮಠ್​ ಜಿಲ್ಲಾಧ್ಯಕ್ಷ, ಯುವ ಕಾಂಗ್ರೆಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net