

ಆಂಧ್ರಪ್ರದೇಶ: ಸ್ಯಾಂಡಲ್ವುಡ್ನ 'ಕಿಸ್' ಬೆಡಗಿ ನಟಿ ಶ್ರೀಲೀಲಾ ಸದ್ಯ ಟಾಲಿವುಡ್ ಅಂಗಳದಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮುಖೇನ ಸಕತ್ ಬ್ಯುಸಿಯಾಗಿರುವ ನಟಿ ಇದೀಗ ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯಿಸಲಿರುವ ಮುಂದಿನ ಚಿತ್ರದಿಂದ ಹೊರನಡೆದಿದ್ದಾರೆ ಎಂದು ವದಂತಿಯೊಂದು ವ್ಯಾಪಕವಾಗಿ ಹರಿದಾಡಿದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಶ್ರೀಲೀಲಾ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಶ್ರೀಲೀಲಾ ನಾಯಕ-ನಾಯಕಿಯಾಗಿ ನಟಿಸಬೇಕಿತ್ತು. ಆದ್ರೆ, ದಿನಾಂಕಗಳ ತೊಂದರೆಯಿಂದ ನಟಿ ಚಿತ್ರವನ್ನು ಬೇರೆ ದಾರಿಯಿಲ್ಲದ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಡೇಟ್ ಸಮಸ್ಯೆಯಿಂದ ಶ್ರೀಲೀಲಾ ಇದೀಗ ಈ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬುದು ಇತ್ತೀಚಿನ ವರದಿ. ಚಿತ್ರದ ಶೂಟಿಂಗ್ ಮುಂದೂಡಲ್ಪಟ್ಟ ಕಾರಣ ಡೇಟ್ಸ್ ತೊಂದರೆಯಾಗಿದೆ. ಇದೀಗ ಶ್ರೀಲೀಲಾ ಪಾತ್ರಕ್ಕೆ ನಾಯಕಿಯಾಗಿ 'ಏಜೆಂಟ್' ಚಿತ್ರದ ಖ್ಯಾತಿಯ ಸಾಕ್ಷಿ ವೈದ್ಯ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಕುರಿತಂತೆ ಅಧಿಕೃತ ಘೋಷಣೆಗೆ ನಿರೀಕ್ಷಿಸಬೇಕಿದೆ,(ಏಜೆನ್ಸೀಸ್).