

ಆಂಧ್ರಪ್ರದೇಶ: ಟಾಲಿವುಡ್ ಅಂಗಳದಲ್ಲಿ ತಮ್ಮ ನಟನೆಯ ಮುಖೇನ ವಿಶೇಷ ಛಾಪು ಮೂಡಿಸಿರುವ ನಟಿ ಸಮಂತಾ ರುತ್ ಪ್ರಭು ಮತ್ತು ರಶ್ಮಿಕಾ ಮಂದಣ್ಣ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದು, ಈ ಮಧ್ಯೆ ಇಬ್ಬರು ನಟಿಯರು ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದೀಗ ಸಮಂತಾ ನಾಯಕಿಯಾಗಿ ನಟಿಸಬೇಕಿದ್ದ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದೆ.
ರಾಹುಲ್ ರವೀಂದ್ರನ್ ನಿರ್ದೇಶನದಲ್ಲಿ ಮೂಡಿಬರಲು ಸಜ್ಜಾಗಿರುವ ಆ್ಯಕ್ಷನ್ ಚಿತ್ರದಲ್ಲಿ ಸಮಂತಾ ಪಾತ್ರವನ್ನು ರಶ್ಮಿಕಾ ಮಂದಣ್ಣ ಮಾಡಲಿದ್ದಾರೆ ಎಂಬ ವದಂತಿಗಳು ಸದ್ಯ ಟಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಘೋಷಣೆಯಾಗಿಲ್ಲ.
ರಾಹುಲ್ ರವೀಂದ್ರನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವು ಮಹಿಳಾ ನಾಯಕಿಯನ್ನು ಹೈಲೈಟ್ ಮಾಡುವ ಪ್ರಾಜೆಕ್ಟ್ ಎಂದು ಹೇಳಲಾಗಿದೆ. ಈ ಹಿಂದೆ ಸಿನಿಮಾಗೆ ಸಮಂತಾ ಅವರನ್ನು ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದ್ರೆ, ಇದೀಗ ನಿರ್ದೇಶಕರು ತಮ್ಮ ನಿರ್ಧಾರದಲ್ಲಿ ಬದಲಾವಣೆ ತಂದಿದ್ದು, ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ವದಂತಿಗಳು ತಿಳಿಸಿವೆ, (ಏಜೆನ್ಸೀಸ್).