ನಕಲಿ ವೈದ್ಯನ ಇಂಜೆಕ್ಷನ್​ಗೆ ಬಾಲಕಿ ಬಲಿ?

nakali
Published on

ಕೋಲಾರ: ಖಾಸಗಿ ಕ್ಲಿನಿಕ್​ ವೈದ್ಯ ನೀಡಿದ ಇಂಜೆಕ್ಷನ್​ಗೆ 8 ವರ್ಷದ ಬಾಲಕಿ ಮೃತಪಟ್ಟ ಆರೋಪ ಕೇಳಿಬಂದಿದೆ.

ಮಾಲೂರು ತಾಲೂಕಿನ ದೊಡ್ಡಿಗಲೂರು ಗ್ರಾಮದ ರಾಜೇಶ್​, ರೇಣುಕಾ ದಂಪತಿ ಪುತ್ರಿ, 4ನೇ ತರಗತಿ ಓದುತ್ತಿದ್ದ ತಾನವಿ ಮೃತೆ.

ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಪಾಲಕರು ಪಕ್ಕದ ಸಂತೆಹಳ್ಳಿ ಕ್ಲಿನಿಕ್​ಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ಮಾಡಿದ ಅಲ್ಲಿನ ವೈದ್ಯ ಇಂಜೆಕ್ಷನ್​ ನೀಡಿದ್ದು, ಇದಾದ ಸ್ವಲ್ಪಹೊತ್ತಿಗೆ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬಾಲಕಿಯ ಜೀವ ಉಳಿಸಲಾಗಲಿಲ್ಲ.

ಸಂತೆಹಳ್ಳಿಯಲ್ಲಿ ಕ್ಲಿನಿಕ್​ ನಡೆಸಲು ಬೇರೊಬ್ಬರು ಅನುಮತಿ ಪಡೆದುಕೊಂಡಿದ್ದಾರೆ. ಆದರೆ, ಅರ್ಹರಲ್ಲದ ವ್ಯಕ್ತಿ ವೈದ್ಯ ಎಂದು ಚಿಕಿತ್ಸೆ ನೀಡಿದ್ದಾನೆ. ಆತ ನಕಲಿ ವೈದ್ಯ ಎಂದು ತಿಳಿದು ಬಂದಿದ್ದು, ಇಂಜೆಕ್ಷನ್​ ಪರಿಣಾಮದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಾಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಪಾಲಕರ ಆಕ್ರೋಶ

ಈ ಮೊದಲು ಚಿಕಿತ್ಸೆ ನೀಡಿದ್ದ ವೈದ್ಯನ ಜಾಗದಲ್ಲಿ ಬೇರೆಯವರು ಕುಳಿತಿದ್ದರು, ಜ್ವರ ಜಾಸ್ತಿ ಇದ್ದ ಕಾರಣ ಕರೆದುಕೊಂಡು ಹೋಗಿದ್ದೆವು. ಚಿಕಿತ್ಸೆ ನೀಡಿದ ಕೂಡಲೇ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾಳೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್​...

ಸಂತೆಹಳ್ಳಿಯಲ್ಲಿ ಅರ್ಹ ವೈದ್ಯ ಕ್ಲಿನಿಕ್​ ನಡೆಸಲು ಅರ್ಜಿ ಪರಿಶೀಲಿಸಿ ಅನುಮತಿ ನೀಡಲಾಗಿದೆ. ಅನುಮತಿ ತೆಗೆದುಕೊಂಡಿರುವ ವೈದ್ಯ ಬಿಟ್ಟು, ಬೇರೊಬ್ಬರು ಬಾಲಕಿಗೆ ಚಿಕಿತ್ಸೆ ನೀಡಿರುವುದರಿಂದ ಟನೆ ಸಂಭವಿಸಿದೆ. ಈ ಸಂಬಂಧ ಅರ್ಹನಿಗೂ ನೋಟಿಸ್​ ನೀಡಿದ್ದು, ನೋಂದಣಿ ರದ್ದುಪಡಿಸಲು ಕ್ರಮವಹಿಸಲಾಗಿದೆ. ಪ್ರಕರಣ ಎಸಗಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗುವುದು.

- ಡಾ.ಶ್ರೀನಿವಾಸ್​, ಜಿಲ್ಲಾ ವೈದ್ಯಾಧಿಕಾರಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net