

ಲಖನೌ : ವಿವಿಧ ನಗರಗಳಲ್ಲಿ ಯುವಜನರ ಬೈಕ್ ಸ್ಟಂಟ್ಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಈ ಬಗ್ಗೆ "ಧೂಮ್ ಆರ್ ಡೂಮಡ್ ?" ಎಂಬ ಶೀರ್ಷಿಕೆಯ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬೈಕ್ ವೀಲಿಂಗ್ ಅಥವಾ ಇತರ ಸ್ಟಂಟ್ಗಳನ್ನು ಮಾಡುವುದು ಅಪರಾಧ ಎಂದು ವಿನೂತನ ಮಾದರಿಯಲ್ಲಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಯುವಜನರು ಬೈಕ್ ಓಡಿಸುವ ಹುಮ್ಮಸ್ಸಿನಲ್ಲಿ ವೀಲಿಂಗ್ ಅಲ್ಲದೆ ಏನೇನೋ ಸರ್ಕಸ್ ಮಾಡುವ ವಿಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡುವುದು ಹೆಚ್ಚಾಗಿದೆ. ಈ ವಿಡಿಯೋಗಳು ನೋಡಲು ವಿಸ್ಮಯವೆನಿಸಿದರೂ ಚಾಲಕರ ಮತ್ತು ಇತರ ಜನರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತುತ್ತವೆ. ಇದಕ್ಕೆ ಉತ್ತರವಾಗಿ ಯುಪಿ ಪೊಲೀಸರು ಟ್ವಿಟರ್ನಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಈ ವೀಡಿಯೋ ಆರಂಭವಾಗುವುದು ಎರಡು ಬೈಕ್ ಸ್ಟಂಟ್ಗಳ ವಿಡಿಯೋ ತುಣುಕುಗಳೊಂದಿಗೆ. ಹಿನ್ನೆಲೆಯಲ್ಲಿ ಧೂಮ್ ಚಿತ್ರದ 'ಧೂಮ್ ಮಚಾಲೇ' ಹಾಡಿನ ರಾಕ್ ಸಂಗೀತ ಕೇಳಿಬರುತ್ತದೆ. ನಂತರ ದೃಶ್ಯ ಬದಲಾಗಿ, ಇದು ಖಂಡಿತವಾಗಿಯೂ ಅಪರಾಧ ಮತ್ತು ನಾವು ಈ ಪ್ರದರ್ಶನಕ್ಕೆ ಅಂತ್ಯ ಹಾಡಿದ್ದೇವೆ ಎಂಬರ್ಥದ ಸಂದೇಶ ಗೋಚರಿಸುತ್ತದೆ. ನಂತರ 'ಸ್ಟೋಲ್ ದ ಶೋ' ಎಂಬ ಹಾಡಿನ ಹಿನ್ನೆಲೆಯಲ್ಲಿ ಈ ಸ್ಟಂಟ್ಗಳನ್ನು ಮಾಡಿದವರ ಮೇಲೆ ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮಗಳನ್ನು ತೋರಿಸಲಾಗುತ್ತದೆ. ನೀವೂ ವಿಡಿಯೋ ನೋಡಿ -
ಈ ವಿಡಿಯೋವನ್ನು ಶೇರ್ ಮಾಡಿರುವ ಯುಪಿ ಪೊಲೀಸರು ರೋಡ್ ಸೇಫ್ಟಿ, ಡ್ರೈವ್ ಸೇಫ್, ಸ್ಟೇ ಸೇಫ್ ಎಂಬ ಹ್ಯಾಶ್ ಟ್ಯಾಗ್ಗಳನ್ನು ಹಾಕಿದ್ದಾರೆ. ಒಂದು ದಿನದ ಹಿಂದೆ ಪೋಸ್ಟ್ ಮಾಡಿದಾಗಿನಿಂದ ಈ ವೀಡಿಯೊ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜನರಿಂದ ಹಲವಾರು ಸಕಾರಾತ್ಮಕ ಕಾಮೆಂಟ್‌ಗಳನ್ನೂ ಪಡೆದಿದೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ