ಕುಡಿಯುವ ನೀರು ಸಂರಕ್ಷಿಸಿ

biriur darmastala
ಬೀರೂರು ಸಮೀಪದ ಕೆ.ದಾಸರಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಯೋಜನಾಧಿಕಾರಿ ಪ್ರಕಾಶ್‌ರಾವ್ ಉದ್ಘಾಟಿಸಿದರು. ಕಾಮನಕೆರೆ ಪಂಚಾಕ್ಷರಿ, ಶೇಖರಪ್ಪ, ಸಂಜೀವ್, ಮಲ್ಲೇಶಪ್ಪ ಇದ್ದರು.
Published on

ಬೀರೂರು: ಜೀವಾಮೃತವಾಗಿರುವ ಕುಡಿಯುವ ನೀರು ಮತ್ತು ಅಂತರ್ಜಲವನ್ನು ನಾಶ ಮಾಡದೆ ಎಲ್ಲರ ಬಳಕೆಗೆ ಅನುವು ಮಾಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಪ್ರಕಾಶ್ ರಾವ್ ಹೇಳಿದರು.
ಸಮೀಪದ ಕಾಮನಕೆರೆ ಗ್ರಾಪಂ ಕೆ.ದಾಸರಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧಗಂಗಾ ಘಟಕ ಉದ್ಘಾಟಿಸಿ ಮಾತನಾಡಿದರು.
ಮಲೆನಾಡು ಭಾಗದಲ್ಲೇ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಕೆರೆಕಟ್ಟೆ, ನದಿ, ಹಳ್ಳಗಳು ಒಣಗಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದ ಕಾರಣ ಅಂತರ್ಜಲವೂ ಕುಸಿದಿದೆ. ಬೋರ್‌ವೆಲ್‌ಗಳನ್ನು ಕೊರೆದರೂ ಹನಿ ನೀರು ಕಾಣದಾಗಿದೆ. ಇಂತಹ ಸಂದರ್ಭದಲ್ಲಿ ಇರುವ ಶುದ್ಧ ನೀರನ್ನು ಮಿತವಾಗಿ ಬಳಸುವುದರ ಜತೆಗೆ ಪ್ರಾಣಿ ಪಕ್ಷಿಗಳಿಗೂ ಮೀಸಲಿಡಬೇಕು ಎಂದರು.
ನಮ್ಮ ದುರಾಸೆಯಿಂದಲೇ ಪರಿಸರ, ಪ್ರಕೃತಿ ನಾಶವಾಗಿ ಇಂತಹ ವೈಪರೀತ್ಯಗಳು ಉಂಟಾಗುತ್ತಿವೆ. ನೀರನ್ನು ಸಂರಕ್ಷಿಸಲೇಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಸಹಜ ಮಳೆಯಾದಾಗ ಮೈ ಮರೆಯುವ ನಾವು ಕೊರತೆಯಾದಾಗ ಕಂಗೆಡುವುದು ತಪ್ಪಬೇಕು. ಕಾಡು, ಕೆರೆಗಳ ಸಂರಕ್ಷಣೆ, ಮಳೆ ನೀರಿನ ಸದ್ಬಳಕೆ ಬಗ್ಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಕಾಮನಕೆರೆ ಗ್ರಾಪಂ ಅಧ್ಯಕ್ಷ ಶೇಖರಪ್ಪ, ಗ್ರಾಪಂ ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಕಾಮನಕೆರೆ ಪಂಚಾಕ್ಷರಿ, ಮಮತಾ, ತಿಪ್ಪೇಶಪ್ಪ, ಮಾಜಿ ಅಧ್ಯಕ್ಷರಾದ ಕಾಮನಕೆರೆ ಮಲ್ಲೇಶಪ್ಪ, ದಾಸರಹಳ್ಳಿ ಮಲ್ಲೇಶ್, ಗ್ರಾಮಾಭಿವೃದ್ಧಿ ಯೋಜನೆಯ ಅಜ್ಜಂಪುರ ಯೋಜನಾಧಿಕಾರಿ ಸಂಜೀವ್ ಮತ್ತು ಮಹದೇವಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net