

ಬೆಂಗಳೂರು:
ಧರ್ಮಸ್ಥಳ ವಿಷಯದಲ್ಲಿ ಷಡ್ಯಂತ್ರ್ಯ, ಪಿತೂರಿ ನಡೆಸಿದವರಿಗೆ ಆ ಮಂಜುನಾಥ ಸ್ವಾಮಿಯೇ ತಕ್ಕ ಶಿಕ್ಷೆ ನೀಡುತ್ತಾನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಸಂಬಂಧ ಕೆಲವು ಶಕ್ತಿಗಳ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಧರ್ಮಸ್ಥಳದ ವಿಚಾರದಲ್ಲಿ ರಾಜಕೀಯ ಅಥವಾ ಧರ್ಮವನ್ನು ತರುವುದಿಲ್ಲ. ಆದರೆ ಕ್ಷೇತ್ರದ ಬಗ್ಗೆ ಸರ್ಕಾರ ನಡೆದುಕೊಂಡ ರೀತಿ ಮಾತ್ರ ಅಪಮಾನ ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿದೆ. ಇದು ಅಕ್ಷಮ್ಯ ಎಂದರು.
ಈ ವಿಷಯದಲ್ಲಿ ಆರಂಭದಿಂದಲೂ ತನಿಖೆಯ ನಾಟಕ ನಡೆದಿದೆ. ಸಿ.ಎಸ್. ದ್ವಾರಕಾನಾಥ್ ಎನ್ನುವ ವ್ಯಕ್ತಿ ಮೊದಲು ದೂರು ನೀಡಿರುತ್ತಾರೆ. ತಕ್ಷಣ ಮುಖ್ಯಮಂತ್ರಿಗಳು ವೇಗವಾಗಿ ಕ್ರಮ ಕೈಗೊಂಡು ಎಸ್‌ಐಟಿ ರಚನೆಗೆ ಆದೇಶ ಮಾಡುತ್ತಾರೆ. ಇದರ ಹಿಂದೆ ಕೆಲ ಎಡಪಂಥೀಯ ಶಕ್ತಿಗಳ ಹುನ್ನಾರದ ಜತೆಗೆ ಕಾಣದ ಶಕ್ತಿಗಳ ಬಹುದೊಡ್ಡ ಕುತಂತ್ರ ಅಡಗಿದೆ ಎಂದು ಅವರು ಆಪಾದಿಸಿದರು.
ಬಾನು ಮುಷ್ತಾಕ್ ಉದ್ಘಾಟನೆಗೆ ನನ್ನ ತಕರಾರು ಇಲ್ಲ:
ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೆ ನನ್ನ ತಕರಾರು ಏನೂ ಇಲ್ಲ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಯಿಯ ಮೆರವಣಿಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಇದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಕೆಲವರು ಈ ಬಗ್ಗೆ ಬಹಳ ಉದ್ಧಟತನ್ದಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದು ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ಬೇಡ, ಬೇಕಾಗಿಯೂ ಇಲ್ಲ ಎಂದರು.
ಬಾನು ಮುಷ್ತಾಕ್ ಅವರಿಂದ ಪೂಜೆ ಮಾಡಿಸುವುದು ಬೇರೆ. ಆದರೆ ಚಾಮುಂಡೇಶ್ವರಿ ದೇಗುಲ ಹಿಂದೂಗಳ ಆಸ್ತಿಯಲ್ಲ ಅಂತಾರೆ. ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಅಪಚಾರ ಸರಿಯಲ್ಲ. ಇದು ಕಾಂಗ್ರೆಸ್ ಸರ್ಕಾರಕ್ಕೆ ಆಪತ್ತು ತರಲಿದೆ ಎಂಬುದನ್ನು ಮರೆಯಬಾರದು ಎಂದರು.
ಕಾಂಗ್ರೆಸ್ ನಾಯಕರು ಒಪ್ಪಲ್ಲ:
ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ತಮಾಷೆಗೂ ಆ ರೀತಿ ಹೇಳುವುದನ್ನು ಕಾಂಗ್ರೆಸ್ ನಾಯಕರು ಒಪ್ಪಲ್ಲ. ಈಗ ಅವರಿಗೆ ಕ್ಷಮೆ ಕೇಳುವ ಪರಿಸ್ಥಿತಿ ಎದುರಾಗಿದೆ ಎಂದರು.
ನೆರೆಯಿಂದ, ಬೆಳೆ ಹಾನಿಯಿಂದ ಜನರು ತತ್ತರಿಸುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸುವುದು ಬಿಟ್ಟು ಇಂಥ ವಿಷಯಗಳಲ್ಲಿ ಕಾಲಹರಣ ಮಾಡುತ್ತಿರುವುದು ನೋವಿನ ಸಂಗತಿ ಎಂದರು.