ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ: ಧರ್ಮ ಸಿಇಒ ಅಪೂರ್ವ ಮೆಹ್ತಾ ಹೇಳಿಕೆ ದಾಖಲು

sushant
Published on

ನವದೆಹಲಿ: ತಮ್ಮ ನಿರ್ಮಾಣದ ಡ್ರೈವ್​ ಚಿತ್ರದಲ್ಲಿ ನಟಿಸಲು ಸುಶಾಂತ್​ ಸಿಂಗ್​ ರಜಪೂತ್​ ಮಾಡಿಕೊಂಡಿದ್ದ ಒಪ್ಪಂದದ ಪ್ರತಿಯನ್ನು ಧರ್ಮ ಪ್ರೊಡಕ್ಷನ್ಸ್​ನ ಸಿಇಒ ಅಪೂರ್ವ ಮೆಹ್ತಾ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ವಿಚಾರಣೆಗಾಗಿ ಮಂಗಳವಾರ ಮುಂಬೈ ಪೊಲೀಸ್​ ಎದುರು ಹಾಜರಾದ ಅಪೂರ್ವ ಮೆಹ್ತಾ ಅಂದಾಜು ಮೂರು ಗಂಟೆ ತಮ್ಮ ಹೇಳಿಕೆಯನ್ನು ದಾಖಲಿಸಿದರು.

ಜೂ.14ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಶಾಂತ್​ ಸಿಂಗ್​ ರಜಪೂತ್​ ನಟಿಸಿದ್ದ ತರುಣ್​ ಮನ್ಸುಖಾನಿ ನಿರ್ದೇಶನ ಡ್ರೈವ್​ ಚಿತ್ರ ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ಬಿಡುಗಡೆಗೊಂಡಿತ್ತು. ಪೂರ್ವ ನಿರ್ಧಾರಿತವಾಗಿದ್ದಂತೆ ಈ ಚಿತ್ರ ಸಿನಿಮಾ ಮಂದಿರಗಳ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವ ಬದಲು ಒಟಿಟಿಯಲ್ಲಿ ಬಿಡುಗಡೆಗೊಂಡಿತ್ತು ವಿಶೇಷವಾಗಿತ್ತು.

ವೃತ್ತಿವೈಷಮ್ಯದ ಹಿನ್ನೆಲೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಬಾಲಿವುಡ್​ ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಅವರು ಇದುವರೆಗೆ 38 ಜನರ ಹೇಳಿಕೆ ದಾಖಲಿಸಿಕೊಂಡಿದ್ದು, ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತು ಕರಣ್​ ಜೋಹರ್​ ಅವರ ಮ್ಯಾನೇಜರ್​ಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದ್ದಾರೆ.

ಸುಶಾಂತ್​ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆತ್ಮಹತ್ಯೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಬಾಲಿವುಡ್​ ನಟ ಶೇಖರ್​ ಸುಮನ್​ ಕೂಡ ಅಭಿಮಾನಿಗಳ ಆಗ್ರಹಕ್ಕೆ ಒತ್ತಾಸೆಯಾಗಿ ನಿಂತಿದ್ದು, ಜಸ್ಟಿಸ್​ ಫಾರ್​ ಸುಶಾಂತ್​ ಫೋರಂ ಅನ್ನು ಸ್ಥಾಪಿಸಿದ್ದಾರೆ.

ಆದರೆ, ಸುಶಾಂತ್​ ಅವರ ಸಹೋದರಿ ಶ್ವೇತಾ ಸಿಂಗ್​ ಕೃತಿ ಸಿಬಿಐ ತನಿಖೆ ಬೇಡವೆಂದು ಹೇಳಿದ್ದು, ತಾವು ಮುಂಬೈ ಪೊಲೀಸರು ವಿಚಾರಣೆ ಮುಗಿಸುವುದನ್ನು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಅವರ ವರದಿ ಬಂದ ನಂತರದಲ್ಲಿ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net