

ನವದೆಹಲಿ: ವಾಣಿಜ್ಯನಗರಿ ಮುಂಬೈನಲ್ಲಿನ ಧಾರಾವಿ ಏಷ್ಯಾದ ಅತಿ ದೊಡ್ಡ ಕೊಳೆಗೇರಿ. ಮಹಾರಾಷ್ಟ್ರದಲ್ಲಿ ಕರೊನಾ ರುದ್ರನರ್ತನದ ಮಧ್ಯೆ ಧಾರಾವಿಯಲ್ಲಿ ಏನಾಗಲಿದೆಯೋ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಅದಾಗಲೇ ಈ ಕೊಳೆಗೇರಿಯ 241 ಮಂದಿಗೆ ಕರೊನಾ ಸೋಂಕಿರುವುದು ದೃಢವಾಗಿದೆ. ದೈಹಿಕ ಅಂತರ ಕಾಯ್ದುಕೊಳ್ಳದ, ಲಕ್ಷಾಂತರ ಜನರಿಂದ ಕಿಕ್ಕಿರಿದ ಧಾರಾವಿಯಲ್ಲಿ ಕರೊನಾ ಸೋಂಕು ಉಲ್ಬಣಿಸಿದರೆ ಏನು ಮಾಡುವುದು ಎಂಬ ಚಿಂತೆ ಸರ್ಕಾರ, ಸಾರ್ವಜನಿಕರು ಇಬ್ಬರನ್ನೂ ಕಾಡುತ್ತಿದೆ.
ಈ ನಡುವೆ ಇಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರಲು ಸಾರ್ವಜನಿಕ ಶೌಚಗೃಹಗಳೇ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ. 2.1 ಚದರ ಕಿ.ಮೀ. ಸುತ್ತಳತೆಯಲ್ಲಿರುವ ಈ ಕೊಳೆಗೇರಿಯಲ್ಲಿ ಸುಮಾರು 3.5 ಲಕ್ಷ ಜನ ವಾಸಿಸುತ್ತಿದ್ದಾರೆ. ಕೆಲವೊಂದು ಕೋಣೆಗಳಲ್ಲಿ 10ರಿಂದ 15 ಮಂದಿ ವಾಸ್ತವ್ಯ ಹೂಡಿದ್ದಾರೆ. ಮುಂಬೈನ ಜನಸಾಂದ್ರತೆ ಒಂದು ಹೆಕ್ಟೇರ್ಗೆ ಸರಾಸರಿ 228 ಮಂದಿ ಆಗಿದ್ದರೆ, ಧಾರಾವಿಯಲ್ಲಿ ಅದು ಬರೋಬ್ಬರಿ 3846. ಹೀಗಾಗಿ ದೈಹಿಕ ಅಂತರ ದೂರದ ಮಾತು.
ನಗರದ ರಿಕ್ಷಾ, ಟ್ಯಾಕ್ಸಿವಾಲಾಗಳು, ಕೂಲಿ ಕಾರ್ವಿುಕರು, ವಲಸೆ ಬಂದವರು ಸೇರಿ ಅಸಂಘಟಿತ ಕಾರ್ವಿುಕ ವಲಯದ ಕುಟುಂಬಗಳೇ ಹೆಚ್ಚಾಗಿ ಇಲ್ಲಿ ನೆಲೆಸಿವೆ. ಮನೆಗಳಲ್ಲಿ ಪ್ರತ್ಯೇಕ ಶೌಚಗೃಹವಿಲ್ಲ. ಹೀಗಾಗಿ, ಜನರು ಸಾರ್ವಜನಿಕ ಶೌಚಗೃಹಗಳನ್ನೇ ಆಧರಿಸಿದ್ದಾರೆ. ಕೆಲ ಮಂದಿ ತೆರೆದ ಪರಿಸರದಲ್ಲೇ ಸ್ನಾನ, ನಿತ್ಯಕರ್ಮಗಳನ್ನು ಮುಗಿಸುತ್ತಾರೆ. ಸಾಮಾನ್ಯ ದಿನಗಳಲ್ಲಂತೂ ನೈರ್ಮಲ್ಯಕ್ಕೆ ಇಲ್ಲಿ ಮಾನ್ಯತೆ ಇಲ್ಲ. ಕರೊನಾ ಅವಾಂತರದಿಂದಾಗಿ ಮುಂಬೈ ಮಹಾನಗರ ಪಾಲಿಕೆ ಇಲ್ಲಿರುವ ಸಾರ್ವಜನಿಕ ಶೌಚಗೃಹ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ಯಾನಿಟೈಸೇಷನ್ ಮುಖಾಂತರ ಸ್ವಚ್ಛತೆ ಕಾಯ್ದುಕೊಳ್ಳಲು ಯತ್ನಿಸುತ್ತಿದೆ. ಮುಂಬೈನ ಕೇಂದ್ರ ಭಾಗದಲ್ಲಿರುವ ಕೊಳೆಗೇರಿಯ (ಬಾಂದ್ರಾ) ಪೂರ್ವ ಭಾಗದಲ್ಲೇ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸವಿದೆ. ಮುಂಬೈನ ಎರಡನೇ ವಾಣಿಜ್ಯ ಜಿಲ್ಲೆಯಲ್ಲಿರುವ ಬಾಂದ್ರಾ ಕುರ್ಲಾ ಸಮುಚ್ಚಯ ಇಲ್ಲಿಂದ ಕೇವಲ 5 ಕಿ.ಮೀ. ದೂರದಲ್ಲಿದೆ.
ಎಷ್ಟು ಹೇಳಿದ್ರೂ ಅಷ್ಟೇ...: ‘ಕೊಳೆಗೇರಿಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಬೇಕೆಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನರಿಗೆ ಅರ್ಥವಾಗುವುದಿಲ್ಲ ಎಂಬುದು ಆರೋಗ್ಯ ಸಿಬ್ಬಂದಿಯ ನಿತ್ಯದ ಅಳಲು. ಧಾರಾವಿ ಕೂಡ ಇದಕ್ಕೆ ಹೊರತಾಗಿಲ್ಲ. ಪೊಲೀಸರು ಬಂದ ಕೂಡಲೇ ಜನರು ಮರೆಯಾಗುತ್ತಾರೆ, 15 ನಿಮಿಷಗಳಲ್ಲಿ ಮತ್ತೆ ಗುಂಪು ಸೇರುತ್ತಾರೆ. ಅಂಗಡಿಗಳಲ್ಲಿ ಖರೀದಿ ವೇಳೆ ಅಂತರ ಕಾಯ್ದುಕೊಳ್ಳಿ ಎಂದರೂ ಅಕ್ಕಪಕ್ಕದಲ್ಲೇ ನಿಲ್ಲುತ್ತಾರೆ. ಕರೊನಾ ಜತೆಗೆ ಜನರನ್ನು ನಿಯಂತ್ರಿಸುವ ಸವಾಲು ಪೊಲೀಸರ ತಾಳ್ಮೆಗೆಡಿಸುತ್ತಿದೆ’ ಎಂದು ಮುಂಬೈ ನಿವಾಸಿ ಭರತ್ ಶೆಟ್ಟಿ ಹೇಳುತ್ತಾರೆ.
ಮನವೊಲಿಕೆಗೇ 150 ವೈದ್ಯರ ನಿಯೋಜನೆ: ಆರಂಭದಲ್ಲಿ ಧಾರಾವಿಯ ಕೋವಿಡ್-19 ಸೋಂಕಿತರ ಚಿಕಿತ್ಸೆಗೆಂದೇ 50 ಬೆಡ್ಗಳ ಸರ್ಕಾರಿ ಆಸ್ಪತ್ರೆ ಸಿದ್ಧಪಡಿಸಲಾಗಿತ್ತು. ನಂತರ ರಾಜೀವ್ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಅನ್ನು 300 ಬೆಡ್ಗಳ ಕೋವಿಡ್ ಚಿಕಿತ್ಸಾ ಘಟಕವನ್ನಾಗಿ ಬದಲಿಸಲಾಯಿತು. ಹಾಗೇ, ಪಾಲಿಕೆ ಶಾಲೆಯೊಂದನ್ನು 700 ಬೆಡ್ಗಳ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಸ್ಥಳೀಯರು ತಮ್ಮ ಸೋಂಕಿನ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುತ್ತಿರುವುದರಿಂದ ಜನರೊಂದಿಗೆ ಸಮಾಧಾನದಿಂದ ಮಾತನಾಡಿ, ಅವರ ಮನವೊಲಿ ಸಲೆಂದೇ 150 ವೈದ್ಯರನ್ನು ಧಾರಾವಿಗೆಂದೇ ನಿಯೋಜಿಸಿದೆ.
ಕೇಂದ್ರ ತಂಡದ ಭೇಟಿ: ಧಾರಾವಿ ಬಿಕ್ಕಟ್ಟನ್ನು ಮುಂಬೈ ಪಾಲಿಕೆ ನಿಭಾಯಿ ಸಬಹುದು ಎಂಬ ವಿಶ್ವಾಸ ಕೇಂದ್ರ ಸರ್ಕಾರಕ್ಕಿಲ್ಲ. ಹೀಗಾಗಿಯೇ, ಏಪ್ರಿಲ್ 21ರಂದು ಕೇಂದ್ರದ ಉನ್ನತಾಧಿಕಾರಿಗಳ ತಂಡವನ್ನು ಕಳುಹಿಸಿ ಕೊಟ್ಟಿರುವ ಮೋದಿ ಸರ್ಕಾರ, ಪರಿಸ್ಥಿತಿ ಅವಲೋಕಿಸಿ ವರದಿ ನೀಡುವಂತೆ ನಿರ್ದೇಶಿಸಿದೆ. ಈ ತಂಡದ ಉಸ್ತುವಾರಿ ಅಧಿಕಾರಿ ಮನೋಜ್ ಜೋಶಿ ಭೇಟಿಯ ಮೊದಲ ದಿನವೇ, ‘ಕೊಳೆಗೇರಿಯಲ್ಲಿನ ಮನೆ ಮನೆಗೆ ತೆರಳಿ ಸೇವೆಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಕೋವಿಡ್ ಹರಡಬಲ್ಲ ಅನಾರೋಗ್ಯಪೀಡಿತ ವ್ಯಕ್ತಿಗಳನ್ನು ಗುರುತಿಸಿ ಪರೀಕ್ಷೆಗಳನ್ನು ನಡೆಸಬೇಕು. ಶಂಕಿತ ಸೋಂಕಿತರನ್ನು ಕೊಳೆಗೇರಿಯಿಂದ ಸ್ಥಳಾಂತರಿಸಬೇಕು’ ಎಂದು ನಿರ್ದೇಶನ ನೀಡಿದ್ದರು.
ಪೊಲೀಸರ ನಿಗಾ: ಕೊಳೆಗೇರಿ ನಿವಾಸಿಗರ ಮೇಲೆ ದಿನದ 24 ಗಂಟೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ. ವಿನಾಕಾರಣ ಮನೆಯಿಂದ ಯಾರೂ ಹೊರಬರದಂತೆ ನೋಡಿಕೊಳ್ಳಲಾಗುತ್ತಿದೆ. ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಶಂಕಿತರ ಪರೀಕ್ಷೆ ವೇಳೆ ಕೆಲ ಮಂದಿ ವೈದ್ಯರಿಗೆ ಸಹಕರಿಸದಿರುವುದೂ ತಲೆನೋವು ತಂದಿದೆ. ವೈದ್ಯರನ್ನು ಅನುಮಾನದಿಂದ ನೋಡುವುದು, ಕಾದಾಡುವುದು, ಪರೀಕ್ಷೆಗೆ ಅಸಹಕಾರ.. ಹೀಗೆ ಕೊಳೆಗೇರಿ ನಿವಾಸಿಗರ ಮನವೊಲಿಸಲೇ ಅರ್ಧ ಸಮಯ ಬೇಕಾಗುತ್ತದೆ ಎಂದು ಆರೋಗ್ಯ ಸಿಬ್ಬಂದಿ ಹೇಳುತ್ತಾರೆ.
ಜಮಾತ್ ಸಭೆ ಕಾರಣ? ಧಾರಾವಿಗೆ ಪಕ್ಕದ ಡಾ. ಬಾಳಿಗಾ ನಗರ ಬಹುಮಹಡಿ ಕಟ್ಟಡದಲ್ಲಿ ಪತ್ತೆಯಾದ ಕರೊನಾ ಕೇಸು ಧಾರಾವಿಯಲ್ಲಿ ಹಬ್ಬಲು ಮೂಲಕಾರಣ ಎನ್ನಲಾಗುತ್ತಿದೆ. ಇಲ್ಲಿನ 56 ವರ್ಷದ ಗಾರ್ವೆಂಟ್ ವ್ಯಾಪಾರಸ್ಥರೊಬ್ಬರು ತಬ್ಲಿಘಿ ಜಮಾತ್ ಸಂಘಟನೆಯ ಧರ್ಮಪ್ರಚಾರಕರನ್ನು ಕರೆಸಿ ತಮ್ಮ ಫ್ಲಾ್ಯಟ್ನಲ್ಲಿ ಸಭೆ ನಡೆಸಿದ್ದರು. ಆ ವ್ಯಕ್ತಿ ಏಪ್ರಿಲ್ 2ರಂದು ಕರೊನಾ ಸೋಂಕಿನಿಂದ ಮೃತಪಟ್ಟರು. ಧಾರಾವಿಯಲ್ಲಿದ್ದ ಜಮಾತ್ ಸದಸ್ಯರು ಆ ಸಭೆಯಲ್ಲಿ ಪಾಲ್ಗೊಂಡಿದ್ದರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಗಾರ್ವೆಂಟ್ ವ್ಯಾಪಾರಸ್ಥನ ಸಾವಿನ ಘಟನೆ ಸಂಭವಿಸುವ ಮೊದಲು, ಈ ಪ್ರಚಾರಕರು ಧಾರಾವಿಯಲ್ಲಿ ನಡೆದಿದ್ದ ಬರ್ತ್ಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಮತ್ತು ಅನೇಕ ಮಂದಿಯನ್ನು ಭೇಟಿ ಮಾಡಿದ್ದರು. ಇದು ಕರೊನಾ ಹರಡುವಿಕೆಗೆ ಕಾರಣವಾಗಿರ ಬಹುದು ಎಂದು ಸ್ಥಳೀಯರು, ಪೊಲೀಸರು ಶಂಕಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರುವ ಎಲ್ಲ ಲಕ್ಷಣಗಳಿವೆ.
ಉದ್ಧವ್ ಹೊಣೆಯಲ್ಲವೇ?: ಮುಂಬೈ ಮಹಾನಗರಕ್ಕೆ ಧಾರಾವಿಯಂಥ ಕೊಳೆಗೇರಿ ಯಾವ ಕ್ಷಣದಲ್ಲಿ ಬೇಕಾದರೂ ಬಹುದೊಡ್ಡ ಹಾನಿ ಮಾಡಬಹುದು ಎಂದು ಅನೇಕ ವರ್ಷಗಳಿಂದ ತಜ್ಞರು ಎಚ್ಚರಿಸುತ್ತಿದ್ದರೂ ಸರ್ಕಾರ, ಮಹಾನಗರ ಪಾಲಿಕೆಗಳು ಮಾತ್ರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. 1996ರಿಂದ ಶಿವಸೇನೆ ನಗರ ಪಾಲಿಕೆಯ ನೇತೃತ್ವ ವಹಿಸಿದೆ. ಶಿವಸೇನೆ ಮುಖ್ಯಸ್ಥರಾಗಿರುವ ಉದ್ಧವ್ ಠಾಕ್ರೆ ಈಗ ರಾಜ್ಯದ ಮುಖ್ಯಮಂತ್ರಿ. ಧಾರಾವಿ ಸುಧಾರಣೆ ಸಂಬಂಧ ಅವರ ಪಕ್ಷ ಪಾಲಿಕೆಯಲ್ಲಿದ್ದುಕೊಂಡು ಏನು ಮಾಡಿತು? ಹಾಗಾದರೆ ಇದು ಉದ್ಧವ್ ನಾಯಕತ್ವದ ವೈಫಲ್ಯವಲ್ಲವೇ? ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ. ಧಾರಾವಿಯ ವಠಾರಗಳಲ್ಲಿ ರೋಗ-ರುಜಿನ ಸಾಮಾನ್ಯ. 1896ರಲ್ಲಿ ಧಾರಾವಿ ಪ್ಲೇಗ್ ಮಹಾಮಾರಿಯಿಂದ ತತ್ತರಿಸಿ ಅರ್ಧಕ್ಕರ್ಧ ಕೊಳೆಗೇರಿ ಖಾಲಿಯಾಗಿತ್ತು. ವಾಂತಿ-ಭೇದಿ, ಕಾಲರಾ, ಟೈಫಾಯ್್ಡ ಸೇರಿ ಹಲವು ರೋಗಗಳು ಇಲ್ಲಿ ಸರ್ವೆ ಸಾಮಾನ್ಯ.
| ರಾಘವ ಶರ್ಮ ನಿಡ್ಲೆ