

ಭಾರತದ ವಾಣಿಜ್ಯ ನಗರಿ ಮುಂಬೈ. ಮಹಾರಾಷ್ಟ್ರದ ರಾಜಧಾನಿಯೂ ಆಗಿರುವ ಈ ಮಹಾನಗರವು ದೇಶದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಇರುವ ನಗರವಾಗಿದೆ. ಇಲ್ಲಿನ ಜನಸಂಖ್ಯೆ 2 ಕೋಟಿಗೂ ಅಧಿಕ. ಇದರಲ್ಲಿ ಅರ್ಧದಷ್ಟು ಜನರು ಸ್ಲಂಗಳಲ್ಲಿಯೇ ವಾಸಿಸುತ್ತಾರೆ. ಹೀಗಾಗಿಯೇ ಇಲ್ಲಿ 2,400ಕ್ಕೂ ಅಧಿಕ ಕೊಳೆಗೇರಿಗಳಿವೆ. ಜಗತ್ತಿನಲ್ಲಿ ಅತಿದೊಡ್ಡ ಸ್ಲಂ ಎಂದೇ ಪರಿಗಣಿಸಲಾಗುವ ಧಾರಾವಿ ಕೂಡ ಇರುವುದು ಇಲ್ಲಿಯೇ.
ಸ್ಲಂ ನಿವಾಸಿಗಳಿಗೆ ಉಚಿತ ವಸತಿ ಒದಗಿಸುವ ಮತ್ತು ಮುಂಬೈಯನ್ನು ಸ್ಲಂ-ಮುಕ್ತ ಮಾಡುವ ಗುರಿಯೊಂದಿಗೆ ಸ್ಲಂ ಪುನರ್ವಸತಿ ಪ್ರಾಧಿಕಾರವನ್ನು (ಎಸ್ಆರ್ಎ) 1995ರಲ್ಲಿ ಸ್ಥಾಪಿಸಲಾಯಿತು.
ಬೆಲೆಬಾಳುವ ಭೂಮಿಯನ್ನೇ ಸಂಪನ್ಮೂಲವಾಗಿ ಬಳಸಿಕೊಂಡು, ಖಾಸಗಿ ಡೆವಲಪರ್ಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಭಿವೃದ್ಧಿಪಡಿಸಲು ಸ್ಲಂ ಪುನರ್ವಸತಿ ಯೋಜನೆಗಳನ್ನು ರೂಪಿಸಲಾಯಿತು. ಸ್ಲಂ ಅಭಿವೃದ್ಧಿಗಾಗಿ ಎಸ್ಆರ್ಎ ಯೋಜನೆಗಳನ್ನು ಮೊದಮೊದಲು ಘೋಷಿಸಿದಾಗ ಡೆವಲಪರ್ಗಳು ಸಂಭ್ರಮಿಸಿದ್ದರು. ಗೋಲಿಬಾರ್, ಧಾರಾವಿಯಂತಹ ಕೊಳೆಗೇರಿಗಳನ್ನು ರಿಯಲ್ ಎಸ್ಟೇಟ್ ಚಿನ್ನದ ಗಣಿಗಳಂತೆ ಆಗ ನೋಡಲಾಗುತ್ತಿತ್ತು, ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಸ್ಲಂ ಅಭಿವೃದ್ಧಿ ಯೋಜನೆಗಳಲ್ಲಿ ಡೆವಲಪರ್ಗಳು ಮುಂದುವರಿಯಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ.
2006ರಲ್ಲಿ ಖಾರ್ ಮತ್ತು ಸಾಂತಾಕ್ರೂಜ್ ಪೂರ್ವದಾದ್ಯಂತ ಹರಡಿರುವ ಗೋಲಿಬಾರ್ ಕೊಳೆಗೇರಿಯ ಪುನರಾಭಿವೃದ್ಧಿಯನ್ನು ಮಹಾರಾಷ್ಟ್ರ ಸರ್ಕಾರವು ಶಿವಾಲಿಕ್ ವೆಂಚರ್ಸ್, ರೋಹನ್ ಲೈಫ್ಸ್ಕೇಪ್ ಮತ್ತು ಯುನಿಟೆಕ್ ಲಿಮಿಟೆಡ್ನ ಜಂಟಿ ಉದ್ಯಮಕ್ಕೆ ಹಸ್ತಾಂತರಿಸಿತು. 16 ವರ್ಷಗಳ ನಂತರ ಯೋಜನೆಯು ಶೇ. 5ರಷ್ಟು ಮಾತ್ರ ಪೂರ್ಣಗೊಂಡಿದೆ. ಯುನಿಟೆಕ್ ಸಂಸ್ಥೆಯು 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಸಿಲುಕಿಕೊಂಡಿತು. ಇದರಿಂದಾಗಿ ಈ ಯೋಜನೆಗೆ ಹಣ ಸಂಗ್ರಹಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಮತ್ತೊಂದು ಜಿಗುಟಾದ ಸಮಸ್ಯೆಯೆಂದರೆ ಭೂಮಿಯ ಬಹು ಮಾಲೀಕತ್ವ. ಗೋಲಿಬಾರ್ನ ಭಾಗಶಃ ಪ್ರದೇಶವು ರಕ್ಷಣಾ ಸಚಿವಾಲಯ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೆರೇಷನ್, ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಇತರರ ಒಡೆತನದಲ್ಲಿದೆ. ಮುಂಬೈನಲ್ಲಿ ಸ್ಲಂ ಪುನರಾಭಿವೃದ್ಧಿಗೆ ಏನೇನು ಅಡಚಣೆಗಳಿವೆ ಎಂಬುದಕ್ಕೆ ಗೋಲಿಬಾರ್ ಒಂದು ಉದಾಹರಣೆ.
ಸ್ಲಂ ಪುನರಾಭಿವೃದ್ಧಿ ಯೋಜನೆಗಳಲ್ಲಿ ಕೈಹಾಕಿರುವ ಡೆವಲಪರ್ಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಭೂ ಮಾಲೀಕತ್ವವು ಸಂಕೀರ್ಣವಾಗಿದೆ. ರಾಜಕೀಯ ಮತ್ತು ಕಾನೂನು ಹಸ್ತಕ್ಷೇಪಗಳು ಆಗಾಗ್ಗೆ ಇದ್ದೇ ಇರುತ್ತವೆ. ಹಣಕಾಸಿನ ಸಮಸ್ಯೆಗಳು ಬಾಧಿಸುತ್ತಿವೆ. ಸ್ಲಂ ಅಭಿವೃದ್ಧಿ ನೀತಿ ಅಥವಾ ಯೋಜನೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಪ್ರಮುಖ ತೊಂದರೆಯಾಗಿದೆ. ಸ್ಲಂ ಪುನರ್ವಸತಿ ಪ್ರಾಧಿಕಾರದ ಅಡಿಯಲ್ಲಿನ 380 ಯೋಜನೆಗಳ ಪೈಕಿ 230 ಯೋಜನೆಗಳಿಗೆ ಹಣವಿಲ್ಲದಂತಾಗಿದೆ. ಈ ಯೋಜನೆಗಳನ್ನು ಪೂರ್ಣಗೊಳಿಸಲು ಡೆವಲಪರ್ಗಳು ವಿಫಲವಾದ ಕಾರಣ ಅಂದಾಜು 35,000 ಕೋಟಿ ರೂಪಾಯಿಯಷ್ಟು ಹಣವು ಈ ಯೋಜನೆಗಳಲ್ಲಿ ಸಿಲುಕಿಕೊಂಡಿದೆ ಎಂದು 2022ರಲ್ಲಿ ಅಂದಿನ ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವ್ಹಾದ್ ಹೇಳಿದ್ದರು.
ಕೊಳೆಗೇರಿಗಳನ್ನು ತೆರವುಗೊಳಿಸುವಲ್ಲಿನ ತೊಂದರೆ, ಭಾರಿ ಪ್ರೀಮಿಯಂ ಪಾವತಿಗಳು ಮತ್ತು ವೆಚ್ಚ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿ ಯೋಜನೆಗಳು ಹಿನ್ನಡೆ ಅನುಭವಿಸಿವೆ.
ಹತ್ತು ಲಕ್ಷ ಜನರನ್ನು ಹೊಂದಿರುವ ಧಾರಾವಿ ಸ್ಲಂ ಪುನರಾಭಿವೃದ್ಧಿ ಯೋಜನೆ ಕೂಡ ಸಮಸ್ಯೆಗಳ ಹುತ್ತವಾಗಿದೆ. ವಾಣಿಜ್ಯ ಕಚೇರಿ ಕಟ್ಟಡಗಳು ದೇಶದಲ್ಲೇ ಅತಿ ಹೆಚ್ಚು ದುಬಾರಿ ಇರುವ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಿಂದ ಕೂಗಳತೆಯ ದೂರದಲ್ಲಿ ಇರುವುದರಿಂದ ಈ ಕೊಳಗೇರಿ ಭೂಮಿಗೂ ಬಂಗಾರದಂತಹ ಬೆಲೆ ಇದೆ. ಭೂಮಿಯನ್ನೇ ಬಂಡವಾಳವಾಗಿಸಿಕೊಂಡು ಈ ಕೊಳೆಗೇರಿಗೆ ಮುಕ್ತಿ ನೀಡಿ, ಬಹುಮಹಡಿ ಕಟ್ಟಡಗಳೊಂದಿಗೆ ವಾಣಿಜ್ಯ ಪ್ರದೇಶವಾಗಿ ಅಭಿವೃದ್ಧಿ ಮಾಡುವ ಯೋಜನೆಯನ್ನು 18 ವರ್ಷಗಳ ಹಿಂದೆಯೇ ರೂಪಿಸಲಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಅದಾನಿ ಸಮೂಹವು ಗುತ್ತಿಗೆ ಪಡೆಯುವುದರೊಂದಿಗೆ ಧಾರಾವಿ ಪುನರಾಭಿವೃದ್ಧಿ ಯೋಜನೆ ಕಾರ್ಯಗತಗೊಳ್ಳುವ ಕನಸುಗಳು ಗರಿಗೆದರಿವೆ.
ದೀರ್ಘಕಾಲದಿಂದ ಕಾರ್ಯ ಗತವಾಗದೆ ವಿಳಂಬವಾಗಿರುವ ಮುಂಬೈನ ಧಾರಾವಿ ಪುನರಾಭಿವೃದ್ಧಿ ಯೋಜನೆಯ ಗುತ್ತಿಗೆಯನ್ನು ಅದಾನಿ ಪ್ರೖೆವೇಟ್ ಪಾಪರ್ಟೀಸ್ ಲಿಮಿಟೆಡ್ ತನ್ನ ಪಾಲಾಗಿಸಿಕೊಂಡಿದೆ. ಒಟ್ಟಾರೆ 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರದೇಶವನ್ನು ಸಕಲ ಮೂಲಸೌಕರ್ಯಗಳೊಂದಿಗೆ ವಸತಿ ಹಾಗೂ ವಾಣಿಜ್ಯ ಪ್ರದೇಶವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅದಾನಿ ಸಮೂಹವು 5,069 ಕೋಟಿ ರೂಪಾಯಿ ಮೊತ್ತದ ಬಿಡ್ ಸಲ್ಲಿಸಿತ್ತು. ನಂತರ ಡಿಎಲ್ಎಫ್ ಕಂಪನಿಯು 2025 ಕೋಟಿ ರೂಪಾಯಿಯ ಮೊತ್ತವನ್ನು ನಮೂದಿಸಿತ್ತು. ಅಂತಿಮ ಬಿಡ್ಡಿಂಗ್ನಲ್ಲಿ ಅದಾನಿ ಮತ್ತು ಡಿಎಲ್ಎಫ್ ಮಾತ್ರ ಅರ್ಹತೆ ಪಡೆದಿದ್ದವು. ಅದಾನಿ ಸಮೂಹವು 2019ರ ಜನವರಿಯಲ್ಲಿ ಯೋಜನೆಯ ಗುತ್ತಿಗೆ ಪಡೆಯುವಲ್ಲಿ ವಿಫಲವಾಗಿದ್ದು, ಈಗ ಯಶಸ್ವಿಯಾಗಿದೆ. ಧಾರಾವಿ ಪುನರಾಭಿವೃದ್ಧಿ ಪ್ರಾಧಿಕಾರ, ಸ್ಲಂ ಪುನರ್ವಸತಿ ಪ್ರಾಧಿಕಾರದ ಜತೆಗೂ ಈ ಯೋಜನೆಯ ಜಾರಿಗಾಗಿ ಎಸ್ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್ - ಅಂದರೆ, ಯೋಜನೆಯ ವ್ಯವಹಾರ ನಿಭಾಯಿಸಲು ಪ್ರತ್ಯೇಕ ಸಂಸ್ಥೆ) ಯನ್ನು ಅದಾನಿ ಸಮೂಹವು ರೂಪಿಸಲಿದೆ. ಈ ಯೋಜನೆಯಲ್ಲಿ ಅದಾನಿ ಸಮೂಹವು ಅಂತಿಮವಾಗಿ ಶೇ. 51ರಷ್ಟು ಪಾಲನ್ನು ಪಡೆಯಲಿದೆ. ಪುನರಾಭಿವೃದ್ಧಿಯ ಮಾಸ್ಟರ್ ಪ್ಲಾನ್ ಅನ್ನು ಎಸ್ಪಿವಿ ರೂಪಿಸಲಿದೆ. ಧಾರಾವಿಯಿಂದ 10 ಕಿ.ಮೀ. ದೂರ ಇಲ್ಲವೇ ಮುಂಬೈ ಮಹಾನಗರದಲ್ಲಿ ಲಭ್ಯವಿರುವ ಪ್ರದೇಶದಲ್ಲಿ ಸ್ಲಂ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಯೋಜಿಸಲಾಗಿದೆ. ಧಾರಾವಿಯಲ್ಲಿ ಸದ್ಯ ಇರುವ ಕೈಗಾರಿಕೆ ಮತ್ತು ವಾಣಿಜ್ಯ ಘಟಕಗಳನ್ನು ಸ್ಥಳಾಂತರಿಸಲಾಗುತ್ತಿಲ್ಲ. ಇವರಿಗಾಗುವ ನಷ್ಟ ಭರಿಸಿಕೊಡಲು ಮುಂದಿನ 5 ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ಮುಂದಿನ 7 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಧಾರಾವಿ ಪುನರಾಭಿವೃದ್ಧಿ ಯೋಜನೆಯು ಕಳೆದೆರಡು ದಶಕಗಳಿಂದ ನನೆಗುದಿಗೆ ಬಿದ್ದಿದೆ. 2.8 ಚದರ ಕಿಲೋ ಮೀಟರ್ಗಳಷ್ಟು ವಿಸ್ತೀರ್ಣದಲ್ಲಿ ಹರಡಿರುವ ಈ ಕೊಳೆಗೇರಿ ಪ್ರದೇಶವು ಅನೌಪಚಾರಿಕ ಚರ್ಮ ಮತ್ತು ಕುಂಬಾರಿಕೆ ಉದ್ಯಮಕ್ಕೆ ನೆಲೆಯಾಗಿದ್ದು, ಇದು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತದೆ. ಈ ಕೊಳಗೇರಿಯನ್ನು ಸುಧಾರಿತ ನಗರ ಮೂಲಸೌಕರ್ಯಗಳೊಂದಿಗೆ ಬಹುಮಹಡಿ ಕಟ್ಟಡಗಳ ಸಮೂಹವಾಗಿ ಪರಿವರ್ತಿಸಲು ರಾಜ್ಯವು ಉದ್ದೇಶಿಸಿತ್ತು. ಇದಕ್ಕಾಗಿ ಕೊಳೆಗೇರಿ ನಿವಾಸಿಗಳು ಮತ್ತು ಇಲ್ಲಿಯೇ ವ್ಯಾಪಾರ ನಡೆಸುತ್ತಿರುವವರು ಸೇರಿದಂತೆ 68,000 ಜನರಿಗೆ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಿತ್ತು. 2004ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತಾದರೂ ವಿವಿಧ ಕಾರಣಗಳಿಂದ ಇದು ನೆಲ ಬಿಟ್ಟು ಮೇಲೆ ಏಳಲೇ ಇಲ್ಲ. ತದನಂತರ 2007ರಲ್ಲಿ ಈ ಸ್ಲಂನಲ್ಲಿ 239 ಹೆಕ್ಟೇರ್ ಪ್ರದೇಶದ ಪುನರಾಭಿವೃದ್ಧಿಗಾಗಿ ಮೊದಲ ಬಾರಿಗೆ ಜಾಗತಿಕ ಟೆಂಡರ್ಗಳನ್ನು ಕರೆದಾಗ, ಪ್ರಪಂಚದಾದ್ಯಂತದ 101 ಡೆವಲಪರ್ಗಳು ಆಸಕ್ತಿ ತೋರಿಸಿದರು. ಅನೇಕ ಬಾರಿ ರದ್ದಾದ ಟೆಂಡರ್ಗಳ ನಂತರ, 2016ರಲ್ಲಿ ಬಿಡ್ಗಳನ್ನು ಮರುಆಹ್ವಾನಿಸಿದಾಗ ಯಾರೂ ಆಸಕ್ತಿ ತೋರಿಸಲಿಲ್ಲ. 2022ರಲ್ಲಿ ಮತ್ತೊಂದು ಪ್ರಯತ್ನ ಮಾಡಲಾಯಿತು. ಅಂತಿಮವಾಗಿ ಅದಾನಿ ಗ್ರೂಪ್ ಟೆಂಡರನ್ನು ತನ್ನದಾಗಿಸಿಕೊಂಡಿದೆ.