

ಶಿವಮೊಗ್ಗ: ಸರ್ಕಾರಗಳೂ ಮಾಡಲಾಗದ ಕೆಲಸವನ್ನು ಧರ್ಮಸ್ಥಳದ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದು ಅವರ ಜನಪರ ಕೆಲಸಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿವೆ ಎಂದು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಜ್ಞಾನವಿಕಾಸ ಕೇಂದ್ರದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಆಡುಮುಟ್ಟದ ಸೊಪ್ಪಿಲ್ಲ, ಪೂಜ್ಯರು ನಡೆಸದ ಕಾರ್ಯಕ್ರಮಗಳಿಲ್ಲ. ಎಲ್ಲ ರಂಗಕ್ಕೂ ಪೂಜ್ಯರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಕೃಷಿ, ರಾಜಕೀಯ, ಶಿಕ್ಷಣ ಸೇರಿ ಹತ್ತು ಹಲವು ರಂಗಗಳಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಕೈಗಳು ಇಂದು ಜಿಲ್ಲೆ, ರಾಜ್ಯ, ದೇಶವನ್ನು ಆಳುವ ಸಾಮರ್ಥ್ಯ ಪಡೆದುಕೊಳ್ಳುತ್ತಿವೆ ಎಂದು ಹೇಳಿದರು.
ಮಹಿಳೆಯ ಮಹತ್ವದ ಕುರಿತು ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಹಾಲಮ್ಮ ಮುದ್ದುಕೃಷ್ಣ ಅವರು ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗಿರುವ ಸಹಕಾರ, ಪೋಕ್ಸೋ ಕಾಯ್ದೆ ಬಗ್ಗೆ ಪಿಎಸ್‌ಐ ಮಂಜಮ್ಮ ಮಾತನಾಡಿದರು. ಮಹಿಳೆಯರಿಗೆ ಇರುವಂತಹ ಸೌಲಭ್ಯ ಮತ್ತು ದತ್ತು ಸ್ವೀಕಾರದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಮಾಹಿತಿ ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯೆ ಪುಷ್ಪಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರಂಗೋಲಿ, ಪುಷ್ಪಗುಚ್ಛ ಹಾಗೂ ಆರತಿ ತಟ್ಟೆ ಸ್ಪರ್ಧೆ ಆಯೋಜಿಸಲಾಗಿತ್ತು. ಶಾಲಿನಿ, ಮಾಲಾ, ನೇತ್ರಾವತಿ, ಮಮತಾ, ಸರಸ್ವತಿ, ರಜಿನಿ, ಶಹೀನಾ, ರೂಪಾ ರಾಣಿ, ಕವಿತಾ ಸೇರಿ 10 ಸಾಧಕಿಯರನ್ನು ಸನ್ಮಾನಿಸಲಾಯಿತು. ವಾತ್ಸಲ್ಯ ಕಾರ್ಯಕ್ರಮದಡಿ ರತ್ನಮ್ಮ, ಕಾಶಿ ಮತ್ತು ಶ್ರೀನಿವಾಸ್ ಅವರಿಗೆ ಒಂದು ಸಾವಿರ ರೂ. ಮಾಸಾಶನ ಮಂಜೂರಾತಿ ಪತ್ರ ವಿತರಿಸಲಾಯಿತು. ಶಿವಮೊಗ್ಗ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿರ್ದೇಶಕ ಮುರಳೀಧರ್ ಕೆ. ಶೆಟ್ಟಿ, ಯೋಜನಾಧಿಕಾರಿ ಕೆ.ಉಮೇಶ್ ಉಪಸ್ಥಿತರಿದ್ದರು.