

ಬೆಂಗಳೂರು: ಹೋಂ ಗಾರ್ಡ್ ಜತೆ ಅನೈತಿಕ ಸಂಬಂಧ ಇಟ್ಟುಕೊಂಡು ಮಹಿಳಾ ಎಸ್ಐಗೆ ಧಮ್ಕಿ ಹಾಕಿದ್ದ ಜೇಬುಗಳ್ಳನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಕಮಲಾನಗರದ ನಿವಾಸಿ ಗೌರಿಬಿದನೂರು ಮೂಲದ ರಾಮಕೃಷ್ಣ (35) ಬಂಧಿತ.
ವಿದ್ಯಾರಣ್ಯಪುರ ಠಾಣೆಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ಮಹಿಳಾ ಎಸ್ಐಗೆ ಆರೋಪಿಯು ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಧಮ್ಕಿ ಹಾಕಿದ್ದ. ಈ ಬಗ್ಗೆ ಎಸ್ಐ ದೂರು ದಾಖಲಿಸಿದ್ದರು. ಪೊಲೀಸರು ಟವರ್ ಲೊಕೇಷನ್ ಮೂಲಕ ಗುರುವಾರ ಮಧ್ಯಾಹ್ನ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?: ವಿದ್ಯಾರಣ್ಯಪುರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಪುಟ್ಟಮ್ಮ ಎಂಬಾಕೆ ಜತೆ ಆರೋಪಿ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಪುಟ್ಟಮ್ಮಗೆ ಸರಿಯಾಗಿ ಕೆಲಸ ಮಾಡುವಂತೆ ಎಸ್ಐ ಸೂಚಿಸಿದ್ದರು. ಅದರಿಂದ ಆಕ್ರೋಶಗೊಂಡ ಪುಟ್ಟಮ್ಮ, ಪ್ರಿಯಕರನಿಗೆ ಈ ವಿಚಾರ ತಿಳಿಸಿದ್ದಳು. ಪುಟ್ಟಮ್ಮಳಿಂದ ಎಸ್ಐ ಮೊಬೈಲ್ ನಂಬರ್ ಪಡೆದುಕೊಂಡ ಆರೋಪಿ, ಜ.7ರ ರಾತ್ರಿ 9.45ರಲ್ಲಿ ಎಸ್ಐಗೆ ಕರೆ ಮಾಡಿ, ಅಶ್ಲೀಲವಾಗಿ ಮಾತಾಡಿದ್ದ. ಮೊಬೈಲ್ ನಂಬರ್ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದಾಗ, ಪುಟ್ಟಮ್ಮನ ಹೆಸರು ಹೇಳಿದ್ದ.
ಕೆಲ ಹೊತ್ತಿನ ಬಳಿಕ ಪುಟ್ಟಮ್ಮಳ ನಗ್ನ ಚಿತ್ರಗಳನ್ನು ಎಸ್ಐ ಮೊಬೈಲ್ಗೆ ಕಳುಹಿಸಿ, ಮತ್ತೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದ. ಮರುದಿನ ಮಧ್ಯಾಹ್ನ 12 ಗಂಟೆಗೆ ತಾನು ಹೇಳಿದ ಜಾಗಕ್ಕೆ 1 ಲಕ್ಷ ರೂ. ತರಬೇಕು. ಇಲ್ಲದಿದ್ದರೆ ನಿಮ್ಮ ಬಗ್ಗೆ ಇಲ್ಲ-ಸಲ್ಲದ ಆರೋಪ ಹೊರಿಸುವುದಾಗಿ ಬೆದರಿಸಿದ್ದ. ಇದರಿಂದ ನೊಂದ ಎಸ್ಐ ಈ ಬಗ್ಗೆ ದೂರು ನೀಡಿದ್ದರು.
ಜೈಲು ಪಾಲಾಗಿದ್ದ ಜೇಬುಗಳ್ಳ
ಆರೋಪಿ ರಾಮಕೃಷ್ಣ ಜೇಬುಗಳ್ಳತನ ಮಾಡಿ ಈ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈತ ಜೈಲಿನಲ್ಲಿದ್ದಾಗ ಹೋಂ ಗಾರ್ಡ್ ಆಗಿದ್ದ ಪುಟ್ಟಮ್ಮನ ಪರಿಚಯವಾಗಿತ್ತು. ಜೇಬುಗಳ್ಳತನ ನಡೆಸಲು ವಿಫಲವಾದಾಗ ಪುಟ್ಟಮ್ಮನಿಂದ ಖರ್ಚಿಗೆಂದು ಹಣ ತೆಗೆದುಕೊಳ್ಳುತ್ತಿದ್ದ. ಕೆಲ ವಕೀಲರೊಂದಿಗೆ ಆರೋಪಿ ಒಡನಾಟ ಹೊಂದಿದ್ದ. ಈ ಹಿಂದೆಯೂ ಪುಟ್ಟಮ್ಮ ಬಳಿ ಕೆಲಸ ಮಾಡಿಸಿದಾಗ ಆರೋಪಿ ಎಸ್ಐಗೆ ಬೆದರಿಕೆ ಹಾಕಿದ್ದ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.