ವಿಮಾನದ ಮಧ್ಯದ ಸೀಟಿನಲ್ಲಿ ಯಾರೂ ಕೂರುವಂತಿಲ್ಲ; ಕರೊನಾ ತಡೆಗಾಗಿ ಹೆಚ್ಚಿದ ಸುರಕ್ಷತೆ

ಸ್ಹ
Published on

ನವದೆಹಲಿ: ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿರುವ ಹಿನ್ನೆಲೆ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿದೇಶಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ದೇಶದಲ್ಲಿ ಹಾರಾಟ ನಡೆಸುವ ವಿಮಾನಗಳಿಗೂ ಸಹ ಅನೇಕ ನಿಯಮಗಳನ್ನು ಹಾಕಲಾಗಿದೆ.

ದೇಶದಲ್ಲಿ ಹಾರಾಟ ನಡೆಸುವ ವಿಮಾನಗಳಿಗೆ DGCA ನೂತನ ಮಾರ್ಗದರ್ಶಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಎಂಟು ನಿಯಮಗಳನ್ನು ಎಲ್ಲಾ ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಪಾಲಿಸಬೇಕಾಗಿದೆ. ವಿಮಾನದ ಸೀಟುಗಳಲ್ಲಿ ಮಧ್ಯದ ಸೀಟನ್ನು ಕಡ್ಡಾಯವಾಗಿ ಖಾಲಿ ಬಿಡುವಂತೆ ತಿಳಿಸಲಾಗಿದೆ. ಪ್ರಯಾಣಿಕರ ನಡುವೆ ಕನಿಷ್ಠ ಒಂದು ಮೀಟರ್​ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.

ನೂತನ ಮಾರ್ಗದರ್ಶಿಯ 8 ನಿಯಮಗಳು ಇಂತಿವೆ:

  •  ಚೆಕ್​ ಇನ್​ ಕೌಂಟರ್​ಗಳಲ್ಲಿ ಮತ್ತು ವಿಮಾನದಲ್ಲಿ ಪ್ರತಿಯೊಬ್ಬ ಪ್ರಯಾಣಿಕರ ನಡುವೆ ಕನಿಷ್ಠ ಒಂದು ಮೀಟರ್​ ಅಂತರವಿರುವಂತೆ ನೋಡಿಕೊಳ್ಳಬೇಕು.
  •  ಚೆಕ್​ ಇನ್​ ಕೌಂಟರ್​ಗಳಲ್ಲಿ ಮತ್ತು ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಸಾಕಷ್ಟು ಸಿಬ್ಬಂದಿ ಲಭ್ಯತೆಯಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
  •  ಪ್ರಯಾಣಿಕರ ನಡುವೆ ಒಂದು ಸೀಟು ಖಾಲಿ ಇರಬೇಕು.
  •  ಬೋರ್ಡಿಂಗ್​ ಮತ್ತು ಡಿಬೋರ್ಡಿಂಗ್​ ಸಮಯದಲ್ಲಿ ಪ್ರಯಾಣಿಕರ ನಡುವೆ ಸಾಕಷ್ಟು ಅಂತರವಿರುವಂತೆ ನೋಡಿಕೊಳ್ಳಬೇಕು.
  •  ವಿಮಾನದೊಳಗೆ ಪ್ರವೇಶಿಸುವಾಗ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸ್ಯಾನಿಟೈಸರ್​ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು.
  •  ಸಿಬ್ಬಂದಿಗಳು ಪ್ರಯಾಣಿಕರಿಗೆ ಸೇವೆ ಸಲ್ಲಿಸುವಾಗ ಅಂತರವನ್ನು ಕಾಯ್ದುಕೊಳ್ಳಬೇಕು.
  •  ಚೆಕ್​ ಇನ್​ ಸಮಯದಲ್ಲಿ ಪ್ರಯಾಣಿಕರ ನಡುವಿನ ಆಸನ ಖಾಲಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
  •  ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು ಯಾವುದೇ ರೀತಿಯ ಕ್ರಮವನ್ನಾದರೂ ಅನುಸರಿಸಬಹುದು. (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net